ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನಕಲಿ ವೆಬ್‌ಸೈಟ್ ಮೂಲಕ ಭಕ್ತರಿಗೆ ವಂಚಿಸುತ್ತಿದ್ದ ರಾಜಸ್ಥಾನದ ತಿಜಾರಿ ಜಿಲ್ಲೆಯ ನಾಸೀರ್ ಹುಸೇನ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಕಲಿ ವೆಬ್‌ಸೈಟ್ ಮೂಲಕ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಂದ ರೂಮ್ ಬುಕ್ಕಿಂಗ್ ಮಾಡಿಸುವುದಾಗಿ ಹೇಳಿ ಹಣ ಪಡೆದು, ನಕಲಿ ರಶೀದಿ ನೀಡಿ ವಂಚಿಸುತಿದ್ದ.ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ದೇವಸ್ಥಾನದ ಕಾರ್‍ಯನಿರ್ವಹಣಾಧಿಕಾರಿ ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ ಬಿ., ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ ಎ. ಕಾಯ್ಕಿಣಿ ಹಾಗೂ ಕೊಲ್ಲೂರು ಉಪನಿರೀಕ್ಷಕ ವಿನಯ ಎಂ. ಕೋರ್ಲಹಳ್ಳಿ ನೇತೃತ್ವದ ತನಿಖಾ ತಂಡವನ್ನು ತಂಡವನ್ನು ರಚಿಸಲಾಗಿತ್ತು.
ನಾಸೀರ್ ಹುಸೇನ್ ಆರೋಪಿ ಎಂದು ಪತ್ತೆಹಚ್ಚಿದ ತನಿಖಾ ತಂಡವು ಆತನನ್ನು ರಾಜಸ್ಥಾನದ ದಾಖಾಪುರಿ ಎಂಬಲ್ಲಿ ಬಂಧಿಸಿ ಲ್ಯಾಪ್‌ಟಾಪ್ ವಶಪಡಿಸಿಕೊಂಡಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಂಪೆನಿಯಿಂದ ಲಂಚ ಲೆಫ್ಟಿನೆಂಟ್ ಕರ್ನಲ್ ಬಂಧನ
ಬೆಂಗಳೂರು ಮೂಲದ ಕಂಪನಿಯಿಂದ 3 ಲಕ್ಷ ರೂ.. ಲಂಚ ಪಡೆದ ಆರೋಪದಲ್ಲಿ ಸಿಬಿಐ ಅಧಿಕಾರಿಗಳು ಲೆಫ್ಟಿನೆಂಟ್ ಕರ್ನಲ್ ಬಂಧಿಸಿದ್ದಾರೆ.ಈ ವೇಳೆ ನಡೆದ ಶೋಧ ಕಾರ್ಯಾಚರಣೆಯಲ್ಲಿ 2.23 ಕೋಟಿ ರೂ. ನಗದು ಪತ್ತೆಯಾಗಿದೆ.
ರಕ್ಷಣಾ ಸಚಿವಾಲಯದ ಅಡಿಯಲ್ಲಿ ರಕ್ಷಣಾ ಉತ್ಪಾದನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಲೆ.ಕರ್ನಲ್ ದೀಪಕ್ ಕುಮಾರ್ ಶರ್ಮಾ ಬಂಧಿತ ಆರೋಪಿ. ಲಂಚ ನೀಡಿದ ವಿನೋದ್ ಕುಮಾರ್ ಎಂಬಾತನನ್ನೂ ಬಂಧಿಸಲಾಗಿದೆ.
ಶರ್ಮಾ ಅವರು ರಕ್ಷಣಾ ಉತ್ಪನ್ನಗಳ ಉತ್ಪಾದನೆ ರಫ್ತು ಸೇರಿ ಇನ್ನಿತರ ವ್ಯವಹಾರಗಳಲ್ಲಿ ಖಾಸಗಿ ಕಂಪನಿ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡಲು ಲಂಚ ಪಡೆಯುತ್ತಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇದರ ಭಾಗವಾಗಿ ಶರ್ಮಾ ಮತ್ತು ಅವರ ಪತ್ನಿ ಕರ್ನಲ್ ಕಾಜಲ್ ಬಾಲಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು.
ಬೆಂಗಳೂರು ಮೂಲದ ಕಂಪನಿಯಿಂದ ಲಂಚ ಸ್ವೀಕಾರ ಮಾಡಿರುವ ಬಗ್ಗೆ ಸಿಬಿಐಗೆ ಮಾಹಿತಿ ಲಭ್ಯವಾಗಿತ್ತು. ಈ ಕಂಪನಿಯ ವ್ಯವಹಾರ ನಿರ್ವಹಿಸುತ್ತಿದ್ದ ರಾಜೀವ್ ಯಾದವ್ ಮತ್ತು ರವಜಿತ್ ಸಿಂಗ್ ಜತೆ ಸಿಂಗ್ ನಿರಂತರ ಸಂಪರ್ಕದಲ್ಲಿದ್ದರು. ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಿಂದ ಕಾನೂನುಬಾಹಿರ ವಿಧಾನಗಳ ಮೂಲಕ ಲಂಚ ಪಡೆಯುತ್ತಿದ್ದರು ಎನ್ನಲಾಗಿದೆ. ಕರ್ನಲ್ ದೀಪಕ್ ಅವರಿಗೆ ಪತ್ನಿಗೆ ಸಂಬಂಧಪಟ್ಟ 10 ಲಕ್ಷ ರೂ.ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.


