Menu

ಬೆಂಗಳೂರಿನಲ್ಲಿ ಆರ್ ಸಿಬಿ ಬೃಹತ್ ಮೊತ್ತ ಪೇರಿಸಲು ನೆರವಾದ ಕೊಹ್ಲಿ, ಪಡಿಕಲ್!

virat kohli

ಬೆಂಗಳೂರು: ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕಲ್ ಅವರ ಅರ್ಧಶತಕ ಸೇರಿದಂತೆ ಬ್ಯಾಟ್ಸ್ ಮನ್ ಗಳ ಭರ್ಜರಿ ಪ್ರದರ್ಶನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 205 ರನ್ ಗಳ ಕಠಿಣ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ಗೆ ಒಡ್ಡಿದೆ.

ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 205 ರನ್ ಸಂಪಾದಿಸಿತು. ಇದು ಪ್ರಸಕ್ತ ಸಾಲಿನ ಐಪಿಎಲ್ ನಲ್ಲಿ ಆರ್ ಸಿಬಿ ಮೊದಲ ಬಾರಿ 200ಕ್ಕಿಂತ ಅಧಿಕ ರನ್ ಗಳಿಸಿದ ಸಾಧನೆ ಮಾಡಿತು.

ವಿರಾಟ್ ಕೊಹ್ಲಿ ಇದೇ ಮೊದಲ ಬಾರಿ ಅರ್ಧಶತಕ ದಾಖಲಿಸಿದ್ದೂ ಅಲ್ಲದೇ ಎರಡು ಮಹತ್ವದ ಅರ್ಧಶತಕಗಳ ಜೊತೆಯಾಟ ನಿಭಾಯಿಸಿ ತಂಡ ಬೃಹತ್ ಮೊತ್ತ ಪೇರಿಸಲು ನೆರವಾದರು. ಈ ಮೂಲಕ ಆರ್ ಸಿಬಿ 32 ಬಾರಿ 200ಕ್ಕಿಂತ ಅಧಿಕ ಮೊತ್ತ ದಾಖಲಿಸಿದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಿಎಸ್ ಕೆ 33 ಬಾರಿ ಈ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದೆ.

ಕೊಹ್ಲಿ ಮತ್ತು ಸಾಲ್ಟ್ ಮೊದಲ ವಿಕೆಟ್ ಗೆ 61 ರನ್ ಜೊತೆಯಾಟದಿಂದ ಪವರ್ ಪ್ಲೇನಲ್ಲಿ ರನ್ ಹೊಳೆ ಹರಿಸಿದರು. ಸಾಲ್ಟ್ (26) ಬೇಗನೇ ನಿರ್ಗಮಿಸಿದರೆ, ನಂತರ ದೇವದತ್ ಪಡಿಕಲ್ ಮತ್ತು ಕೊಹ್ಲಿ ಎರಡನೇ ವಿಕೆಟ್ ಗೆ 95 ರನ್ ಜೊತೆಯಾಟದಿಂದ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರು.

ಕೊಹ್ಲಿ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದೂ ಅಲ್ಲದೇ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 70 ರನ್ ಬಾರಿಸಿ ಔಟಾದರು. ಪಡಿಕಲ್ 27 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ 50 ರನ್ ಬಾರಿಸಿ ಔಟಾದರು.

ಕೊನೆಯ ಹಂತದಲ್ಲಿ ಟಿಮ್ ಡೇವಿಡ್ ಮತ್ತು ಜಿತೇಶ್ ಕುಮಾರ್ 42 ರನ್ ಜೊತೆಯಾಟ ನಿಭಾಯಿಸಿದರು. ಟಿಮ್ ಡೇವಿಡ್ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 23 ರನ್ ಗಳಿಸಿದರೆ, ಜಿತೇಶ್ 10 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 20 ರನ್ ಬಾರಿಸಿ ತಂಡದ ಮೊತ್ತ 200ರ ಗಡಿ ದಾಟುವಂತೆ ನೋಡಿಕೊಂಡರು.

ರಾಜಸ್ಥಾನ್ ಪರ ಜೋಫ್ರಾ ಆರ್ಚರ್ ಪರಿಣಾಮಕಾರಿ ದಾಳಿ ನಡೆಸಿ 1 ವಿಕೆಟ್ ಪಡೆದರೆ, ಸಂದೀಪ್ ಶರ್ಮ ದುಬಾರಿ ಆದರೂ 2 ವಿಕೆಟ್ ಗಳಿಸಿದರು.

Related Posts

Leave a Reply

Your email address will not be published. Required fields are marked *