ಮುಂಬೈ: ರಾಯಲ್ ಚಾಲೆಂಜರ್ಸ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ ನಲ್ಲಿ 13,000 ರನ್ ಪೂರೈಸಿದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದಾರೆ.
ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 18 ರನ್ ಗಳಿಸುತ್ತಿದ್ದಂತೆ ಟಿ-20 ಕ್ರಿಕೆಟ್ ನಲ್ಲಿ 13000 ರನ್ ಪೂರೈಸಿದರು.
36 ವರ್ಷದ ವಿರಾಟ್ ಕೊಹ್ಲಿ ಈ ಸಾಧನೆ ಮಾಡಲು 17 ರನ್ ಬೇಕಿತ್ತು. ಮಿಚೆಲ್ ಸ್ಟಾರ್ಕ್ ಓವರ್ ನಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದರು. ಅತ್ಯಂತ ವೇಗವಾಗಿ 13000 ರನ್ ಪೂರೈಸಿದ ಎರಡನೇ ಹಾಗೂ ಈ ಸಾಧನೆ ಮಾಡಿದ ಜಾಗತಿಕ ಮಟ್ಟದಲ್ಲಿ 5ನೇ ಬ್ಯಾಟ್ಸ್ ಮನ್ ಆಗಿದ್ದಾರೆ.
ವಿರಾಟ್ ಕೊಹ್ಲಿ 386 ಪಂದ್ಯದಲ್ಲಿ ಈ ಸಾಧನೆ ಮಾಡಿದರೆ ಆರ್ ಸಿಬಿ ಹಾಗೂ ವೆಸ್ಟ್ ಇಂಡೀಸ್ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ 381 ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮ 438 ಪಂದ್ಯಗಳಲ್ಲಿ 11,851 ರನ್ ಬಾರಿಸಿ ಭಾರತೀಯರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಟಿ-20ಯಲ್ಲಿ ಚೇಸಿಂಗ್ ವೇಳೆ 8000 ರನ್ ಪೂರೈಸಿದ ಮೊದಲ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.