ಕೋಗಿಲು ಅಕ್ರಮ ಮನೆ ತೆರವು ಮತ್ತು ಪರ್ಯಾಯ ಮನೆ ಹಂಚಿಕೆ ವಿಚಾರವಾಗಿ ವಸತಿ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದು, ಕರ್ನಾಟಕದವರಿದ್ದರೆ ಮಾತ್ರ ಮನೆ ಕೊಡುತ್ತೇವೆ. ಹೊರಗಿನಿಂದ ಬಂದವರಿಗೆ ನಾವು ಮನೆ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಕೋಗಿಲು ಅಕ್ರಮ ಮನೆ ತೆರವು ವಿಚಾರಕ್ಕೆ ಪಾಕಿಸ್ತಾನದ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೂ ಈ ವಿಷಯಕ್ಕೂ ಏನು ಸಂಬಂಧ, ನಮ್ಮ ಬಗ್ಗೆ ಹೇಳೋದಕ್ಕೆ ಅವರು ಯಾರು, ನಮ್ಮ ದೇಶದಲ್ಲಿ ನಾವು ಮುಸ್ಲಿಮರನ್ನು ನೋಡಿ ಕೊಳ್ಳೋಕೆ ನಾವಿದ್ದೇವೆ, ಪಾಕಿಸ್ತಾನದವರು ಮೊದಲು ಅವರ ದೇಶ ನೋಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೋಗಿಲು ಮನೆಗಳಿಂದ ತೆರವುಗೊಂಡವರಿಗೆ ಮನೆ ಹಂಚಿಕೆ ವಿಚಾರದಲ್ಲಿ ಡಾಕ್ಯುಮೆಂಟ್ ಪರಿಶೀಲನೆ ಮಾಡುವಂತೆ ಸಿಎಂ, ಡಿಸಿಎಂ ಸೂಚನೆ ನೀಡಿದ್ದಾರೆ. ಕರ್ನಾಟಕದವರು ಇದ್ದರೆ ಮಾತ್ರ ಮನೆ ಕೊಡೋದಕ್ಕೆ ತೀರ್ಮಾನ ಮಾಡಿದ್ದೇವೆ. ಬೇರೆ ಕಡೆಯಿಂದ ಬಂದವರಿಗೆ ನಾವು ಮನೆ ಕೊಡೋದಿಲ್ಲ. ಈ ವಿಷಯದಲ್ಲಿ ಕೆಸಿ ವೇಣುಗೋಪಾಲ್ ಹಸ್ತಕ್ಷೇಪ ಏನೂ ಇಲ್ಲ. ವೇಣುಗೋಪಾಲ್ ಟಿವಿಯಲ್ಲಿ ಹೀಗೆ ಬಂದಿದೆ ನೋಡಿ ಅಂತ ಹೇಳಿದ್ದಷ್ಟೇ, ಅವರು ನಮ್ಮ ಪಕ್ಷದ ನಾಯಕರು, ಹಾಗೆ ಹೇಳಿದ್ದಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಆಧಾರ್, ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ ಮಾತ್ರ ಮನೆ ಕೊಡೋದು, ಬೇರೆಯವರಿಗೆ ಕೊಡಲಾಗದು. ಅಧಿಕೃತ ದಾಖಲಾತಿ ಇದ್ದರೆ ಮಾತ್ರ ಮನೆಗಳನ್ನು ಕೊಡಲು ಸಾಧ್ಯ. ಸಿಕ್ಕಿರುವ ಮಾಹಿತಿ ಪ್ರಕಾರ, 185 ಜನರಲ್ಲಿ 20 ಜನ ಕರ್ನಾಟಕದ ಬೇರೆ ಜಿಲ್ಲೆಯವರು ಇದ್ದಾರೆ. ನಾವು ಯಾರ ಟ್ರ‍್ಯಾಪ್‌ಗೂ ಬೀಳುವುದಿಲ್ಲ, ಕೇರಳದವರು ಬಂದರೂ ಏನು ಘೋಷಣೆ ಮಾಡಲಿಲ್ಲ ಎಂದರು.
ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ 167 ಶೆಡ್‌ಗಳನ್ನು ತೆರವುಗೊಳಿಸಲಾಗಿತ್ತು. ಅವರೆಲ್ಲರಿಗೂ ನೋಟಿಸ್ ನೀಡಿ, ಸರ್ಕಾರದ ಜಾಗವಾಗಿದ್ದು ತೆರವು ಮಾಡುವಂತೆ ಅವರ ಗಮನಕ್ಕೂ ತರಲಾಗಿತ್ತು, ಆದರೂ ಖಾಲಿ ಮಾಡಿರಲಿಲ್ಲ. ಅವರಿಗೆಲ್ಲ ಬೈಯ್ಯಪ್ಪನಹಳ್ಳಿಯಲ್ಲಿ ಮನೆ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನುಮುಂದೆ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನಿನ ಅಕ್ರಮ ಒತ್ತುವರಿ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಒಂದು ವೇಳೆ ಮನೆ ಕಟ್ಟಿದರೆ ಸಂಬಂಧಿಸಿದ ಅಧಿಕಾರಿ ಗಳನ್ನೇ ಜವಾಬ್ದಾರಿ ಮಾಡಲಾಗುತ್ತದೆ. ಅಕ್ರಮವಾಗಿ ಶೆಡ್‌ಗಳನ್ನು ಕಟ್ಟಿ ವಾಸವಿದ್ದವರಲ್ಲಿ ಮುಂದಿನ ಎರಡು ದಿನಗಳಲ್ಲಿ ಅರ್ಹರನ್ನು ಗುರುತಿಸಿ, ಪಟ್ಟಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾನವೀಯತೆ ನೆಲೆ ಯಲ್ಲಿ ಅರ್ಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎಂದು ಸ್ಪಷ್ಟಪಡಿಸಿದರು.


