ದೇಶಕ್ಕೆ ವಿಶ್ವವೇ ತಿರುಗಿ ನೋಡುವ ಬಹುದೊಡ್ಡ ಗಂಡಾಂತರ ಕಾದಿದ್ದು, ಭಾರಿ ಮಟ್ಟಿನ ಆಘಾತ ಎದುರಾಗಲಿದೆ, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಮೈಸೂರಿನ ನಮನ್ ಫೌಂಡೇಶನ್ ವತಿಯಿಂದ ನಿರ್ಮಾಣವಾಗಲಿರುವ ಧ್ಯಾನ ಕೇಂದ್ರದ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದೆ ಎಂದು ಹೇಳಿದರು. ಮುಂದಾಗುವ ಸಮಸ್ಯೆಗಳನ್ನು ಅರಿತುಕೊಂಡು ಈಗಲೇ ಪರಿಹಾರ ಮಾಡಿಕೊಂಡರೆ ಸೂಕ್ತ. ಇಲ್ಲವಾದಲ್ಲಿ ಸಮಸ್ಯೆ ಇದೆ ಎಂದಿದ್ದಾರೆ.
ಸಂಕ್ರಾಂತಿವರೆಗೆ ಏನು ತೊಂದರೆ ಇಲ್ಲ. ಬಳಿಕ ಅರಸನ ಅರಮನೆಗೆ ಕಾರ್ಮೋಡ ಕವಿದೀತು, ಮನಸ್ಸುಗಳು ನಿಂತಾಗ ಮಾತ್ರ ಯುದ್ಧ ನಿಲ್ಲುತ್ತದೆ. ಮನುಷ್ಯ ಮೌನವಾಗಿದ್ದರೆ ಹೆಚ್ಚು ಜ್ಞಾನ ಸಂಪಾದನೆ ಮಾಡಬಹುದು. ಮಾನವ ಜ್ಞಾನ ಹಾಗೂ ವಿವೇಕವನ್ನು ಸನ್ಮಾರ್ಗದಲ್ಲಿ ಬಳಸಿಕೊಂಡಾಗ ಮೋಕ್ಷ ಪ್ರಾಪ್ತಿಯಾಗುತ್ತದೆ. ಪ್ರಕೃತಿ ಹಾಗೂ ವೃಕ್ಷಗಳಿಗೆ ಅಗಾಧ ಶಕ್ತಿ ಇದೆ. ಪಂಚತಂತ್ರ ವೃಕ್ಷಗಳಲ್ಲಿ ಹೆಚ್ಚು ಆಮ್ಲಜನಕ ಉತ್ಪಾದನೆಯಾಗುತ್ತದೆ. ಅವು ದೈವ ವೃಕ್ಷಗಳಾಗಿವೆ ಎಂದು ಸ್ವಾಮೀಜಿ ಹೇಳಿದರು.
ಮೂರು ವಾರಗಳ ಹಿಂದೆ ಹಾಸನದಲ್ಲಿ ಭವಿಷ್ಯ ಹೇಳಿದ್ದ ಸ್ವಾಮೀಜಿ, ಮೇಘಸ್ಫೋಟ, ಜಲಪ್ರಳಯ ಹಾಗೂ ವಾಯುವಿನಿಂದ ಆಪತ್ತು ಬರುತ್ತದೆ. ಮನುಷ್ಯ ಓಡಾಡುತ್ತಲೇ ಸಾಯುತ್ತಾನೆ. ಜನ ಜೀವನ ಅಸ್ಥಿರಗೊಳ್ಳಲಿದೆ ಎಂದು ಹೇಳಿದ್ದರು. ಮೇ ತಿಂಗಳಲ್ಲಿ ಬೆಳಗಾವಿಯಲ್ಲಿ ಮಾತನಾಡಿದ್ದ ಸ್ವಾಮೀಜಿ, ಲೋಕಕ್ಕೆ ಜಲ, ವಾಯು ಗಂಡಾಂತರ ಎದುರಾಗಲಿದೆ ಎಂದಿದ್ದರು. ಹಿಮಾಲಯ ಕರಗಿಹೋಗಲಿದೆ. ಮೇಘಸ್ಫೋಟ ಸಾಧ್ಯತೆಗಳಿವೆ. ಭೂಕಂಪಗಳು ಸಂಭವಿಸಲಿವೆ ಎಂದಿದ್ದರು. ರಾಜಕೀಯ ಮುಖಂಡರಿಗೆ ಸಾವಿನ ಭಯ ಇದೆ ಎಂದು ಹೇಳಿದ್ದರು. ಇತ್ತೀಚೆಗೆ ಬಾಗಲಕೋಟೆಯಲ್ಲಿ ಮಾತನಾಡಿದ್ದ ಕೋಡಿಶ್ರೀಗಳು, ಹಾಲು ಕೆಟ್ಟರೂ, ಹಾಲುಮತ ಸಮುದಾಯ ಕೆಡುವುದಿಲ್ಲ ಎನ್ನುವ ಮಾತಿದೆ. ಹಾಲುಮತದ ಸಮುದಾಯದವರ ಕೈಯಲ್ಲಿ ರಾಜ್ಯದ ಅಧಿಕಾರವಿದೆ, ಬಿಡಿಸುವುವುದು ಅಷ್ಟು ಸುಲಭವಲ್ಲ, ಅವರಾಗಿಯೇ ಬಿಡಬೇಕೇ ಹೊರತು, ನೀವು ಬಿಡಿಸಿಕೊಳ್ಳುವುದು ಸುಲಭವಲ್ಲ ಎಂದು ಹೇಳಿದ್ದರು.