ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಸದ್ಯಕ್ಕೇನು ತೊಂದರೆಯಿಲ್ಲ ಎಂದು ಹಾಸನ ಜಿಲ್ಲೆಯ ಅರಸಿಕೇರೆಯ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದ್ದಾರೆ.
ಹಳೇ ಹುಬ್ಬಳ್ಳಿಯಲ್ಲಿ ಶ್ರೀ ಸಿದ್ದಾರೂಢ ಮಠಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ಕಂಟಕವಿಲ್ಲ ಎಂದರು. ಈ ಮೂಲಕ ಸರ್ಕಾರ ಬೀಳುತ್ತದೆ ಎಂಬ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದವರಿಗೆ ಶಾಕ್ ನೀಡಿದರು.
ಈಗ ಏನು ಬಹಳ ಹೇಳಲ್ಲ. ಯುಗಾದಿಗೆ ಎಲ್ಲವನ್ನೂ ಹೇಳುತ್ತೇನೆ. ಮಧ್ಯದಲ್ಲಿಯೇ ಹೇಳೋಕೆ ಬರಲ್ಲ ಎಂದು ಅವರು ವರ್ಷದ ಪೂರ್ಣ ಭವಿಷ್ಯವನ್ನು ಯುಗಾದಿವರೆಗೂ ಕಾಯುವಂತೆ ಸೂಚಸಿದರು.
ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಸದ್ಯಕ್ಕೇನು ತೊಂದರೆಯಿಲ್ಲ. ರಾಜ್ಯದಲ್ಲಿ ಮುಂದಿನ ವರ್ಷ ಶುಭ ಅಶುಭ ಎರಡೂ ಇದೆ. ಬರುವ ದಿನಗಳು ಶುಭ ಮತ್ತು ಅಶುಭ ಗಳಿಂದ ಕೂಡಿದ್ದು, ಮುಂದಿನ ದಿನಗಳಲ್ಲಿ ಭೂಮಿಯ ಧಗೆ ಹೆಚ್ಚಾಗಲಿದೆ. ಯುಗಾದಿಗೆ ಎಲ್ಲವನ್ನೂ ಹೇಳ್ತೇನೆ ಎಂದು ವಿವರಿಸಿದರು.
ಇದೇ ವೇಳೆ ಹಾವೇರಿ ಮತ್ತು ವಿಜಯಪುರದ ಮೈಲಾರ ಕಾರ್ಣಿಕದ ಭವಿಷ್ಯ ಪ್ರಸ್ತಾಪಿಸಿದಾಗ, ಇದಕ್ಕೂ ಮೈಲಾರ ಕಾರ್ಣಿಕಕ್ಕೂ ಸಂಬಂಧವಿಲ್ಲ ಎಂದು ಕೋಡಿಶ್ರೀಗಳು ಸ್ಪಷ್ಟನೆ ನೀಡಿದರು.
ಯುಗಾದಿ ಸಂದರ್ಭದಲ್ಲಿ ಪೂರ್ಣ ಭವಿಷ್ಯ ಪ್ರತಿ ವರ್ಷ ಯುಗಾದಿ ಸಂದರ್ಭದಲ್ಲಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು ಆ ವರ್ಷದ ಭವಿಷ್ಯ ನುಡಿಯುತ್ತಾರೆ. ಆ ವರ್ಷದ ಗಂಡಾಂತರಗಳು, ರಾಜಕೀಯ ವಾತಾವರಣ, ಮಳೆ, ಬೆಳೆಯ ಬಗ್ಗೆ ಮಾತನಾಡುತ್ತಾರೆ. ಸದ್ಯ ಸೋಮವಾರ ಹುಬ್ಬಳ್ಳಿಯಲ್ಲಿ ಸರ್ಕಾರ ಪತನವಾಗುತ್ತಾ ಇಲ್ಲವೋ ಎಂಬ ಬಗ್ಗೆ ಮಾತ್ರ ಮಾತನಾಡಿದ್ದು, ಯುಗಾದಿಗೆ ಪೂರ್ಣ ಭವಿಷ್ಯವನ್ನು ಹೇಳಲಿದ್ದಾರೆ.