ಸಹಕಾರ ಸಚಿವ ಕೆಎನ್ ರಾಜಣ್ಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದು, ಕೆಲವೇ ಹೊತ್ತಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.
ವಿವಾದಾತ್ಮಕ ಹೇಳಿಕೆಗಳಿಂದ ಬೇಸತ್ತ ಹೈಕಮಾಂಡ್ ಸಲಹೆ ಮೇರೆಗೆ ಸಿಎಂ ರಾಜೀನಾಮೆಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಸಿಎಂ ಸೂಚನೆ ಮೇರೆಗೆ ಕೆಎನ್ ರಾಜಣ್ಣ ಸೋಮವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಕೆಲವು ತಿಂಗಳಿಂದ ಡಿಕೆ ಶಿವಕುಮಾರ್ ಹಾಗೂ ಇತರರ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದ ಕೆಎನ್ ರಾಜಣ್ಣ ವಿರುದ್ಧ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿತ್ತು.
ಈಗಾಗಲೇ ಸಕ್ರಿಯ ರಾಜಕಾರಣಕ್ಕೆ ವಿದಾಯ ಘೋಷಿಸುವುದಾಗಿ ಘೋಷಿಸಿದ್ದ ಕೆಎನ್ ರಾಜಣ್ಣ ಅವಧಿಗೂ ಮುನ್ನವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ವಿಕೆಟ್ ಪತನಗೊಂಡಂತಾಗಿದೆ.
ಲೋಕಸಭಾ ಚುನಾವಣೆ ಕುರಿತು ರಾಹುಲ್ ಗಾಂಧಿ ಮತಗಳ್ಳತನದ ಬಗ್ಗೆ ಗಂಭೀರ ಆರೋಪ ಮಾಡಿದ್ದರೆ, ಮಹದೇವಪುರದಲ್ಲಿ ಚುನಾವಣೆ ಸೋಲಿಗೆ ನಮ್ಮ ಲೋಪವೇ ಕಾರಣ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಲೋಕಸಭಾ ಚುನಾವಣೆ ವೇಳೆ ನಮ್ಮ ಸರ್ಕಾರವೇ ಅಧಿಕಾರದಲ್ಲಿತ್ತು ಎಂದು ಹೇಳಿಕೆ ನೀಡಿ ಹೈಕಮಾಂಡ್ ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದರು ಎಂದು ಹೇಳಲಾಗಿದೆ.