ಸಚಿವ ಸ್ಥಾನದಿಂದ ಕೆಎನ್ ರಾಜಣ್ಣ ಅವರ ವಜಾ ಖಂಡಿಸಿ ಮಧುಗಿರಿ ಪುರಸಭೆ ಸದಸ್ಯತ್ವಕ್ಕೆ ಮಧುಗಿರಿ 10ನೇ ವಾರ್ಡ್ ನ ಗಿರಿಜಾ ಮಂಜುನಾಥ್ ರಾಜೀನಾಮೆ ಸಲ್ಲಿಸಿದ್ದಾರೆ. ಸ್ವ ಇಚ್ಛೆಯಿಂದ ರಾಜೀನಾಮೆ ನೀಡರುವುದಾಗಿ ಪತ್ರದಲ್ಲಿ ಉಲ್ಲೇಖಿಸಿ ಮಧುಗಿರಿ ಉಪ ವಿಭಾಗಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜಣ್ಣ ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ತುಮಕೂರಿನ ಮಧುಗಿರಿಯಲ್ಲಿ ಆಕ್ರೋಶ ವ್ಯಕ್ತಪಡಿಸಿ, ರಾಜಣ್ಣ ವಿರುದ್ಧ ಕೈಗೊಂಡಿರುವ ಕ್ರಮವನ್ನು ಕಾಂಗ್ರೆಸ್ ಹೈ ಕಂಆಂಡ್ ರದ್ದುಪಡಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜಣ್ಣ ಬೆಂಬಲಿಗರು ರಸ್ತೆಯ ಮೇಲೆ ಮಲಗಿ, ಕಾಂಗ್ರೆಸ್ ಹೈಕಮಾಂಡ್‌ನ ನಿರ್ಧಾರವನ್ನು ಖಂಡಿಸಿ ಮಧುಗಿರಿಯಲ್ಲಿ ಬಂದ್‌ಗೆ ಕರೆ ನೀಡಿದ್ದಾರೆ. ವಾಲ್ಮೀಕಿ ಕ್ರಾಂತಿ ಸೇನೆ ಸೇರಿದಂತೆ ಹಲವು ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿವೆ.
ನಾವು ಕಾಂಗ್ರೆಸ್‌ಗೆ ಮತ ಹಾಕಿರುವುದು ರಾಜಣ್ಣ ಅವರಿಗಾಗಿಯೇ. ಅವರಿಗಾಗಿ ಸಂಘಟನೆ ಮಾಡಿದ್ದೇವೆ. ಈ ಬೆಳವಣಿಗೆಯ ಹಿಂದೆ ಕಾಣದ ಕೈಗಳ ಕೈವಾಡ ಇದೆ, ಮುಂದಿನ ದಿನಗಳಲ್ಲಿ ಎಲ್ಲವೂ ಬಯಲಾಗಲಿದೆ ಎಂದು ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆ ವೇಳೆ ಯುವಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಅಹಿಂದ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ರಾಜಣ್ಣ ತುಮಕೂರು ಜಿಲ್ಲೆಗೆ ಅರಸರಿದ್ದಂತೆ, ಅಹಿಂದ ವರ್ಗದ ದೇವರು. ಅವರನ್ನು ವಜಾಗೊಳಿಸಿದರೆ ಕಾಂಗ್ರೆಸ್‌ಗೆ ಮುಖಭಂಗವಾಗಲಿದೆ. ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜಣ್ಣರ ವಜಾದಿಂದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯಾದ್ಯಂತ ದೊಡ್ಡ ಪೆಟ್ಟು ಬೀಳಲಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಷ್ಟವಾಗಲಿದೆ ಎಂದು ರಾಜಣ್ಣರ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.