ಕನ್ನಡ ನಾಡಿನ ಹೆಮ್ಮೆಯ ಕೆಎಂಎಫ್ ನಂದಿನಿ ಬ್ರಾಂಡಿನ ಎಲ್ಲ ಉತ್ಪನ್ನಗಳನ್ನು ಅಮೆರಿಕ ದೇಶದ ಫ್ಲೋರಿಡಾದ ಲೇಕ್ ಲ್ಯಾಂಡ್ ನಲ್ಲಿ ಅಧಿಕೃತವಾಗಿ ಇಂದು ನಡೆದ ನಾವಿಕ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು. ನಂದಿನಿ ಉತ್ಪನ್ನಗಳಾದ ಹಾಲು, ಮೊಸರು, ತುಪ್ಪ, ಸಿಹಿ ತಿಂಡಿಗಳು ಸೇರಿದಂತೆ ಎಲ್ಲಾ ಉತ್ಪನ್ನಗಳನ್ನು ಅಮೆರಿಕದಾದ್ಯಂತ ತಲುಪಿಸುವ ಗುರಿಯನ್ನು ಕೆಎಂಎಫ್ ಹೊಂದಿದೆ. ಈ ಮಹತ್ವದ ಹೆಜ್ಜೆಯು, ಕರ್ನಾಟಕದ ರೈತರ ಆರ್ಥಿಕ ಸಬಲೀಕರಣಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಕೆಎಂಎಫ್ MD ಶಿವಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಸಚಿವರಾದ ಶಿವರಾಜ್ ತಂಗಡಗಿ, ಶಾಸಕರಾದ ರವಿ ಗಾಣಿಗ, ಅರವಿಂದ ಬೆಲ್ಲದ್ ನಟಿ ರಮ್ಯ, ನಟರಾದ ಶ್ರೀನಾಥ್, ನಾಗತಿ ಹಳ್ಳಿ ಚಂದ್ರಶೇಖರ್, ರಕ್ಷಿತ್ ಶೆಟ್ಟಿ ಇನ್ನೂ ಹಲವು ಗಣ್ಯರು ಉಪಸ್ಥಿತರಿದ್ದರು. ನಾವಿಕದ ಶಿವಕುಮಾರ್ ಮತ್ತು ಹರ್ಷಿತ್ ಗೌಡ ಹಾಗೂ ಪದಾಧಿಕಾರಿಗಳು ಹಾಜರಿದ್ದರು. ರಾಜ್ಯದ ನಾನಾ ಕಲಾಪ್ರಕಾರಗಳ ತಂಡವು ಸಮ್ಮೇಳನದಲ್ಲಿ ರಾರಾಜಿಸಿವೆ.
ನಾರ್ತ್ ಅಮೆರಿಕ ವಿಶ್ವ ಕನ್ನಡ ಒಕ್ಕೂಟವು ಉತ್ತರ ಅಮೆರಿಕಾದಲ್ಲಿರುವ ಕನ್ನಡಿಗರ ಸಂಘವಾಗಿದೆ. ಅದೇ ನಾವಿಕ, ಕನ್ನಡ ಭಾಷೆ ಮತ್ತು ಅದರ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಪ್ರಚಾರ ಮಾಡಲು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಕನ್ನಡ ಸಂಘಟನೆ.