ಕೋಲ್ಕತಾ: ಸಂಘಟಿತ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡ ಐಪಿಎಲ್ ಟಿ-20 ಪಂದ್ಯದಲ್ಲಿ 80 ರನ್ ಗಳ ಭಾರೀ ಅಂತರದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿದೆ.
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಎಸ್ ಆರ್ ಎಚ್ 16.4 ಓವರ್ ಗಳಲ್ಲಿ 120 ರನ್ ಗೆ ಆಲೌಟಾಯಿತು.
ಈ ಗೆಲುವಿನೊಂದಿಗೆ ಕೊನೆಯ ಸ್ಥಾನದಲ್ಲಿದ್ದ ಕೆಕೆಆರ್ 4 ಪಂದ್ಯಗಳಿಂದ ತಲಾ 2 ಸೋಲು ಹಾಗೂ ಗೆಲುವಿನೊಂದಿಗೆ 4 ಅಂಕ ಸಂಪಾದಿಸಿ 5ನೇ ಸ್ಥಾನಕ್ಕೇರಿದರೆ, ಎಸ್ ಆರ್ ಎಚ್ ಕೊನೆಯ ಸ್ಥಾನಕ್ಕೆ ಕುಸಿಯಿತು. ಐಪಿಎಲ್ ಇತಿಹಾಸದಲ್ಲೇ ರನ್ ಗಳ ಆಧಾರದ ಮೇಲೆ ಅತೀ ದೊಡ್ಡ ಗೆಲುವು ದಾಖಲಿಸಿ ಕೆಕೆಆರ್ ದಾಖಲೆ ಬರೆಯಿತು. 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 78 ರನ್ ಗಳಿಂದ ಗೆದ್ದಿದ್ದು ಇದುವರೆಗಿನ ದಾಖಲೆಯಾಗಿತ್ತು.
ಕೆಕೆಆರ್ ಪರ ಮಾರಕ ದಾಳಿ ಸಂಘಟಿಸಿದ ವೈಭವ್ ಅರೋರಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ತಲಾ 3 ವಿಕೆಟ್ ಪಡೆದು ಮಿಂಚಿದರು. ಆಂಡ್ರೆ ರಸೆಲ್ 2 ವಿಕೆಟ್ ಪಡೆದರು.
ಸಿಡಿಲಬ್ಬರದ ಆಟದಿಂದ ಗಮನ ಸೆಳೆದಿದ್ದ ಹೈದರಾಬಾದ್ 9 ರನ್ ಗೆ 3 ವಿಕೆಟ್ ಕಳೆದುಕೊಂಡು ಆರಂಭದಲ್ಲೇ ಗೆಲುವಿನ ಭರವಸೆ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಕ್ಲಾಸೆನ್ (33), ಕಮಿಂಡು ಮೆಂಡಿಸ್ (27), ನಿತಿಶ್ ಕುಮಾರ್ ರೆಡ್ಡಿ (19) ಮತ್ತು ಪ್ಯಾಟ್ ಕಮಿನ್ಸ್ (14) ಮಾತ್ರ ಎರಡಂಕಿಯ ಮೊತ್ತ ದಾಟಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕೆಕೆಆರ್ ಕೂಡ 16 ರನ್ ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ನಾಯಕ ಅಜಿಂಕ್ಯ ರಹಾನೆ (38), ವೆಂಕಟೇಶ್ ಅಯ್ಯರ್ ಮತ್ತು ಅಂಗರಿಕ್ ರಘುವಂಶಿ ಅರ್ಧಶತಕ ಬಾರಿಸಿ ತಂಡವನ್ನು ಆಧರಿಸಿದರು.
ರಘುವಂಶಿ 32 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 50 ರನ್ ಸಿಡಿಸಿದರೆ, ಅಯ್ಯರ್ 29 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 60 ರನ್ ಗಳಿಸಿದರು. ರಿಂಕು ಸಿಂಗ್ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 32 ರನ್ ಚಚ್ಚಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು.