ಕೋಲ್ಕತಾ: ಕೋಲ್ಕತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಣ ಐಪಿಎಲ್ ಪಂದ್ಯ ಮಳೆಯಿಂದ ರದ್ದುಗೊಂಡಿದ್ದು ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ.
ಕೋಲ್ಕತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 4 ವಿಕೆಟ್ ಕಳೆದುಕೊಂಡು 214 ರನ್ ಸಂಪಾದಿಸಿತು. ಕಠಿಣ ಗುರಿ ಬೆಂಬತ್ತಿದ ಕೆಕೆಆರ್ 1 ಓವರ್ ನಲ್ಲಿ ವಿಕೆಟ್ ಕಳೆದುಕೊಳ್ಳದೇ 7 ರನ್ ಗಳಿಸಿದ್ದಾಗ ಸುರಿದ ಭಾರೀ ಮಳೆ ಪಂದ್ಯವನ್ನು ಬಲಿ ಪಡೆಯಿತು.
ಪಂಜಾಬ್ ಕಿಂಗ್ಸ್ 9 ಪಂದ್ಯಗಳಿಂದ 5 ಜಯ ಹಾಗೂ 3 ಸೋಲು ಹಾಗೂ ಒಂದು ಪಂದ್ಯ ರದ್ದಿನಿಂದ 11 ಅಂಕ ಸಂಪಾದಿಸಿ 4ನೇ ಸ್ಥಾನದಲ್ಲಿ ಉಳಿದುಕೊಂಡರೆ, ಕೆಕೆಆರ್ 7 ಅಂಕದೊಂದಿಗೆ 7ನೇ ಸ್ಥಾನದಲ್ಲೇ ಉಳಿದುಕೊಂಡಿದ್ದು, ಇದರಿಂದ ಪ್ಲೇಆಫ್ ಹಾದಿ ದುರ್ಗಮಗೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ ಪ್ರಭಾಸಿಮ್ರನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಅರ್ಧಶತಕಗಳ ನೆರವಿನಿಂದ ಬೃಹತ್ ಮೊತ್ತ ಪೇರಿಸಿತು. ಇವರಿಬ್ಬರು ಮೊದಲ ವಿಕೆಟ್ ಗೆ 120 ರನ್ ಜೊತೆಯಾಟ ನಿಭಾಯಿಸಿದರು.
ಪ್ರಭಾಸಿಮ್ರನ್ ಸಿಂಗ್ 49 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ನೊಂದಿಗೆ 83 ರನ್ ಸಿಡಿಸಿದರೆ, ಪ್ರಿಯಾಂಶ್ ಆರ್ಯ 35 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಸೇರಿ 69 ರನ್ ಬಾರಿಸಿ ಔಟಾದರು. ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ ಅಜೇಯ 25 ರನ್ ಗಳಿಸಿದರು.