ಚೆನ್ನೈ: ವೆಸ್ಟ್ ಇಂಡೀಸ್ ಮೂಲದ ಸ್ಪಿನ್ನರ್ ಸುನೀಲ್ ನಾರೇನ್ ಆಲ್ ರೌಂಡ್ ಪ್ರದರ್ಶನದಿಂದ ಕೋಲ್ಕತಾ ನೈಟ್ ರೈಡರ್ಸ್ ತಂಡ 8 ವಿಕೆಟ್ ಗಳ ಭಾರೀ ಅಂತರದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 103 ರನ್ ಗೆ ಆಲೌಟಾಯಿತು. ಇದು ಐಪಿಎಲ್ ಇತಿಹಾಸದಲ್ಲೇ ಚೆನ್ನೈ ದಾಖಲಿಸಿದ 3ನೇ ಅತೀ ಕಳಪೆ ಮೊತ್ತವಾಗಿದೆ.
ಸುಲಭ ಗುರಿ ಬೆಂಬತ್ತಿದ ಕೆಕೆಆರ್ ತಂಡ 10.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಕೆಕೆಆರ್ ಅತೀ ವೇಗವಾಗಿ ಗೆಲುವು ದಾಖಲಿಸಿದ ಸಾಧನೆ ಮಾಡಿತು.
ಬೌಲಿಂಗ್ ನಲ್ಲಿ 3 ವಿಕೆಟ್ ಪಡೆದು ಮಿಂಚಿದ್ದ ಸುನೀಲ್ ನರೇನ್ 18 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿ ಔಟಾದರು. ಇದರಿಂದ ಕೆಕೆಆರ್ ಭಾರೀ ಅಂತರದ ಗೆಲುವಿನೊಂದಿಗೆ ರನ್ ಸರಾಸರಿಯನ್ನೂ ಉತ್ತಮಪಡಿಸಿಕೊಳ್ಳಲು ನೆರವಾದರು.
ಸುನೀಲ್ ಮತ್ತು ಕ್ವಿಂಟನ್ ಡಿ ಕಾಕ್ (23) ಮೊದಲ ವಿಕೆಟ್ ಗೆ 46 ರನ್ ಪೇರಿಸಿದರು. ನಂತರ ರಿಂಕು ಸಿಂಗ್ (ಅಜೇಯ 15 ರನ್) ಮತ್ತು ನಾಯಕ ಅಜಿಂಕ್ಯ ರಹಾನೆ (ಅಜೇಯ 20 ರನ್) ತಂಡದ ಗೆಲುವಿನ ಔಪಚಾರಿಕತೆ ಬೇಗನೇ ಮುಗಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೊಮ್ಮೆ ಬ್ಯಾಟಿಂಗ್ ನಲ್ಲಿ ಮುಗ್ಗರಿಸಿತು. ಋತುರಾಜ್ ಗಾಯಕ್ವಾಡ್ ಅನುಪಸ್ಥಿತಿಯಲ್ಲಿ ಧೋನಿ ನಾಯಕನಾಗಿ ಮರಳಿದರೂ ತಂಡದ ಪ್ರದರ್ಶನದಲ್ಲಿ ಯಾವುದೇ ಸುಧಾರಣೆ ಕಂಡು ಬರಲಿಲ್ಲ. ತವರಿನಲ್ಲಿ ಗೆಲುವಿನ ದಾಖಲೆ ಹೊಂದಿರುವ ಚೆನ್ನೈಗೆ ಇದು ತವರಿನಲ್ಲಿ ಮೂರನೇ ಸೋಲಾಗಿದೆ.
ಕಳೆದ ಪಂದ್ಯದಲ್ಲಿ ಮಿಂಚಿದ್ದ ಧೋನಿ ಮತ್ತೆ ವಿಫಲರಾದರೆ, ಶಿವಂ ದುಬೆ 29 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 31 ರನ್ ಹಾಗೂ ವಿಜಯ್ ಶಂಕರ್ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 29 ರನ್ ಬಾರಿಸಿ ತಂಡದ ಮೊತ್ತ 100ರ ಗಡಿ ದಾಟಿಸಲು ನೆರವಾದರು.
ಸುನೀಲ್ ನರೇನ್ 3 ವಿಕೆಟ್ ಪಡೆದು ಮಿಂಚಿದರೆ, ಹರ್ಷಿತ್ ರಾಣಾ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಗಳಿಸಿದರು.