ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ಗಾಳಿಪಟ ಹಾರಿಸುವ ದಾರ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಕುತ್ತಿಗೆಯನ್ನೇ ಸೀಳಿದ್ದು, ಅತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ಸಂಜಕುಮಾರ ಗುಂಡಪ್ಪ (48) ಮೃತಪಟ್ಟವರು. ಅವರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.
ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆಯಲು ಬೈಕ್‌ನಲ್ಲಿ ತೆರಳುತ್ತಿದ್ದಾಗ ಮಾಂಜಾ ದಾರ ಕುತ್ತಿಗೆಗೆ ತಗುಲಿ ಕೊಯ್ದಿದೆ. ಬೈಕ್ ಮೇಲಿಂದ ಕೆಳಗೆ ಬಿದ್ದು ರಕ್ತ ಸೋರಿ ಅಸು ನೀಗಿದ್ದಾರೆ.
ಚಿಟಗುಪ್ಪ ತಾಲೂಕಿನಲ್ಲಿ ಸಂಕ್ರಾಂತಿ ಆಚರಣೆ ವೇಳೆ ಗಾಳಿಪಟಗಳನ್ನು ಹಾರಿಸುವುದು ರೂಢಿಯಲ್ಲಿದೆ. ಎರಡು ದಿನಗಳ ಓರ್ವ ಬಾಲಕನ ಕೈಗೆ ಗಾಳಿಪಟದ ದಾರ ಸಿಲುಕಿ ಗಂಭೀರ ಗಾಯಗೊಂಡಿದ್ದ. ಘಟನೆ ಬಳಿಕ ತಹಸೀಲ್ದಾರ್ ಮಂಜುನಾಥ ಪಾಂಚಾಳ ತಾಲೂಕಿನಾದ್ಯಂತ ಗಾಳಿಪಟ ಹಾರಿಸುವ ವೈರ್ ಮಾಂಜ ದಾರ ಮಾರಾಟ ನಿಷೇಧಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದರು. ದುರಂತ ಸ್ಥಳಕ್ಕೆ ಹೋದ ವೇಳೆ ದಾರ ಇರಲಿಲ್ಲ, ಸೂಕ್ತ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.


