ಉಚ್ಛನ್ಯಾಯಾಲಯದ ಆದೇಶದಂತೆ ದೇವಾಲಯದ ಹೆಸರಿಗೆ ಖಾತೆ ದಾಖಲು ಮಾಡಿ ದೇವಾಲಯದ ಹೆಸರು-ಧಾರ್ಮಿಕ ದತ್ತಿ ಇಲಾಖೆ ಎಂದು ಪಹಣಿಯಲ್ಲಿ ನಮೂದಿರುವ ಬಗ್ಗೆ ಕ್ರಮವಹಿಸಿ ಪಾಲನಾ ವರದಿಯನ್ನು ಸಲ್ಲಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಮತ್ತು ಧಾರ್ಮಿಕ ದತ್ತಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮುಜರಾಯಿ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಮೀನುಗಳನ್ನು ಸಂರಕ್ಷಿಸುವ ಸಲುವಾಗಿ ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ಹಸಿರು ಬೇಲಿ ನಿರ್ಮಿಸುವಂತೆ ಹಾಗೂ ಅನಧಿಕೃತ ಒತ್ತುವರಿಗಳನ್ನು ಗುರುತಿಸಿ ಅವುಗಳನ್ನು ತೆರವುಗೊಳಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ವಿಧಾನಪರಿಷತ್‍ನಲ್ಲಿ ಕೆ. ಅಬ್ದುಲ್ ಜಬ್ಬರ್ ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿ ರಾಜ್ಯದಲ್ಲಿ ಮುಜರಾಯಿ ಆಸ್ತಿಗಳು ಒತ್ತುವರಿಯಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಒತ್ತುವರಿಗಳನ್ನು ಗುರುತಿಸುವ ಸಲುವಾಗಿ ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ 2022ನೇ ಸಾಲಿನವರೆಗೆ ದೇವಾಲಯದ ಹೆಸರಿನಲ್ಲಿ ಇಂಡೀಕರಣವಾಗಿದ್ದ ಆಸ್ತಿಗಳು 3,915 ಎಕ್ಕರೆ, 2023 ಮತ್ತು 2024 ರ ಸಾಲಿನ ಅಂತ್ಯದವರೆಗೆ 11,498 ಎಕ್ಕರೆ ಆಸ್ತಿಗಳನ್ನು ದೇವಾಲಯದ ಹೆಸರಿಗೆ ಪಹಣಿಯಲ್ಲಿ ಇಂಡೀಕರಿಸಲಾಗಿದ್ದು, ಒಟ್ಟಾರೆ ಇವರೆಗೆ ಸುಮಾರು 15,413 ಎಕ್ಕರೆ ಆಸ್ತಿಗಳನ್ನು ದೇವಾಲಯಗಳ ಹೆಸರಿಗೆ ಪಹಣಿಯಲ್ಲಿ ಇಂಡೀಕರಣ ಮಾಡಲಾಗಿದೆ. ಧಾರ್ಮಿಕ ಸಂಸ್ಥೆಗಳ ಜಮೀನುಗಳ ಪ್ರಕರಣಗಳನ್ನು ಮೇಲುಸ್ತುವಾರಿ ಮಾಡಲು ಆಯುಕ್ತಾಲಯದ ಹಂತದಲ್ಲಿ ಹಿರಿಯ ಅಧಿಕಾರಿಯನ್ನು ಎಸ್ಟೇಟ್ ಆಫೀಸರ್ ನ್ನಾಗಿ ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಧಾರ್ಮಿಕ ದತ್ತಿ ಆಯುಕ್ತರ ಕಚೇರಿಯ ಕೇಂದ್ರಸ್ಥಾನಿಕ ಸಹಾಯಕರು-2 ರವರನ್ನು ಎಸ್ಟೇಟ್ ಆಫೀಸರನ್ನಾಗಿ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಉಚ್ಛನ್ಯಾಯಾಲಯದ ಆದೇಶದಂತೆ ದೇವಾಲಯದ ಹೆಸರಿಗೆ ಖಾತೆ ದಾಖಲು ಮಾಡಿ ದೇವಾಲಯದ ಹೆಸರು-ಧಾರ್ಮಿಕ ದತ್ತಿ ಇಲಾಖೆ ಎಂದು ಪಹಣಿಯಲ್ಲಿ ನಮೂದಿರುವ ಬಗ್ಗೆ ಕ್ರಮವಹಿಸಿ ಪಾಲನಾ ವರದಿಯನ್ನು ಸಲ್ಲಿಸುವಂತೆ ಎಲ್ಲಾ ಜಿಲ್ಲಾದಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.