ಕೇರಳದ ತಿರುವನಂತಪುರದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ನಿರಂತರ ಲೈಂಗಿಕ ಕಿರುಕುಳದಿಂದ ಬೇಸತ್ತ ಟೆಕ್ಕಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಾಡ್ಜ್ ವೊಂದರಲ್ಲಿ ಟೆಕ್ಕಿ ಆನಂದ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇನ್ ಸ್ಟಾಗ್ರಾಂ ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾರೆ. ಆರೆಸ್ಸೆಸ್ ಸದಸ್ಯರು ತನಗೆ ನಿರಂತರ ಲೈಂಗಿಕ ಕಿರುಕುಳ ನೀಡಿದ್ದಾರೆ. ಬಾಲ್ಯದಿಂದಲೂ ತಾನು ದೌರ್ಜ್ಯನ್ಯಕ್ಕೊಳಗಾಗಿದ್ದು, ಮಾನಸಿಕವಾಗಿ ನೊಂದಿದ್ದಾಗಿ ಬರೆದಿದ್ದಾರೆ.
ಈ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಮಕ್ಕಳ ಸುರಕ್ಷತೆ ಮತ್ತು ಲೈಂಗಿಕ ಕಿರುಕುಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಕಳವಳ ಹುಟ್ಟು ಹಾಕಿದೆ. ಆರ್ಎಸ್ಎಸ್ನಂತಹ ಸಂಘಟನೆಗಳು ತಮ್ಮ ಶಿಬಿರಗಳಲ್ಲಿ ಸುರಕ್ಷತಾ ಕ್ರಮಗಳನ್ನು ಬಲಪಡಿಸಬೇಕೆಂಬ ಆಗ್ರಹ ಹೆಚ್ಚಿದೆ. ಆರೆಸ್ಸೆಸ್ ಈ ಆರೋಪಗಳನ್ನು ಸಂಶಯಾಸ್ಪದ ಮತ್ತು ಆಧಾರರಹಿತ ಎಂದು ತಳ್ಳಿಹಾಕಿದೆ.
ಐಟಿ ಉದ್ಯೋಗಿ ಆನಂದು ಅಜಿ ಅವರ ಈ ಆತ್ಮಹತ್ಯೆ ಪ್ರಕರಣ ಸಂಬಂಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ. ಆನಂದು ಅಜಿ ಅವರ ಸಾವಿನ ನಂತರ, ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮುಂದಾಗಿದ್ದಾರೆ. ಈ ಘಟನೆ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟಕ್ಕೆ ಪ್ರಮುಖ ತಿರುವು ನೀಡುವ ಸಾಧ್ಯತೆಯಿದೆ. ಆನಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದರೂ, ಎಫ್ಐಆರ್ನಲ್ಲಿ ಆರೆಸ್ಸೆಸ್ ಹೆಸರು ಏಕೆ ಸೇರಿಸಿಲ್ಲ ಎಂದು ಕಾಂಗೆಸ್ ನಾಯಕಿ ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ವಿ.ಕೆ. ಸನೋಜ್ ಅವರು ಪ್ರಿಯಾಂಕ ಗಾಂಧಿಯವರೊಂದಿಗೆ ನ್ಯಾಯಕ್ಕಾಗಿ ಧ್ವನಿಗೂಡಿಸಿದ್ದಾರೆ. ಜವಾಬ್ದಾರರಾದವರನ್ನು ಕಾನೂನಿನ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿರುವ ಅವರು ಆನಂದ ಉಲ್ಲೇಖಿಸಿದ ಶಾಖೆಗಳನ್ನು ನಡೆಸುವವರನ್ನು ಬಂಧಿಸಬೇಕು ಎಂದು ಹೇಳಿದ್ದಾರೆ.