ಬ್ರಿಟನ್‌ನಲ್ಲಿ ನರ್ಸ್ ಆಗಿರುವ ಕೇರಳದ ಮಹಿಳೆ ತನ್ನ ಮಗನಿಗೆ ಸ್ನೇಹಿತನ ಜೊತೆ ಐಸಿಸ್‌ಗೆ ಸೇರಲು ಒತ್ತಾಯಿಸಿದ್ದ ಆರೋಪ ಕೇಳಿ ಬಂದಿದೆ.
ಬಾಲಕ ಬ್ರಿಟನ್‌ನಿಂದ ಕೇರಳಕ್ಕೆ ಹಿಂದಿರುಗಿದ್ದು ಚಿಕ್ಕಪ್ಪನಿಗೆ ವಿಷಯ ತಿಳಿಸಿ, ತನ್ನ ತಾಯಿಯ ಸ್ನೇಹಿತ ಐಸಿಸ್ ಸಂಬಂಧಿತ ವೀಡಿಯೊಗಳನ್ನು ತೋರಿಸಿದ್ದಾನೆ ಮತ್ತು ಭಯೋತ್ಪಾದಕ ಸಂಘಟನೆಗೆ ಸೇರಲು ಒತ್ತಾಯಿಸಿದ್ದಾನೆ, ತಾಯಿ ಕೂಡ ನನ್ನನ್ನು ಐಸಿಸ್ ಭಯೋತ್ಪಾದನಾ ಸಂಘಟನೆಯಲ್ಲಿ ಸೇರಿಕೊಳ್ಳುವಂತೆ ಒತ್ತಾಯಿಸಿದ್ದಾಳೆ ಎಂದು ಆರೋಪಿಸಿರುವುದು ವರದಿಯಾಗಿದೆ.
ಬಾಲಕನ ಚಿಕ್ಕಪ್ಪ ಆತನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಕೇರಳ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಅಡಿ ಪ್ರಕರಣ ದಾಖಲಿಸಿದ್ದಾರೆ.
ಹುಡುಗನ ತಾಯಿ ಈ ಆರೋಪಗಳನ್ನು ನಿರಾಕರಿಸಿದ್ದು, ವೈವಾಹಿಕ ವಿವಾದ ಮುಂದುವರಿದಿದ್ದು, ಪತಿ ಮಗುವನ್ನು ನನ್ನ ವಿರುದ್ಧ ಬಳಸುತ್ತಿದ್ದಾನೆ ಎಂದು ಹೇಳಿದ್ದಾರೆ. ಬಾಲಕನ ಹೇಳಿಕೆಗಳು ಗಂಭೀರ ಸ್ವರೂಪದ್ದಾಗಿವೆ. ಯುಎಪಿಎಯ ಸಂಬಂಧಿತ ವಿಭಾಗಗಳ ಅಡಿ ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದೇವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಉಗ್ರರ ಸಂಪರ್ಕ ಹೊಂದಿದ್ದ ಬಾಲಕರಿಬ್ಬರ ಬಂಧನ
ಛತ್ತೀಸ್‌ಗಢ ಭಯೋತ್ಪಾದನಾ ನಿಗ್ರಹ ದಳವು ಐಸಿಸ್ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಇಬ್ಬರು ಬಾಲಕರನ್ನು ರಾಯ್‌ಪುರದಲ್ಲಿ ಬಂಧಿಸಿದೆ. ಅವರ ವಿರುದ್ಧ 1967 ರ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ)ಯ ನಿಬಂಧನೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪಮುಖ್ಯಮಂತ್ರಿ ವಿಜಯ್ ಶರ್ಮಾ ತಿಳಿಸಿದ್ದಾರೆ.
ಬಾಲಕರಿಬ್ಬರು ಉಗ್ರಗಾಮಿ ವಿಷಯದಿಂದ ಪ್ರಭಾವಿತರಾಗಿದ್ದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇತರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು. ಅವರಿಗೆ ಸಾಕಷ್ಟು ಮಾಹಿತಿಯಿದ್ದು, ಐಸಿಸ್ ಹೆಸರಿನಲ್ಲಿ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸುತ್ತಿದ್ದರು ಎಂದು ಹೇಳಿದ್ದಾರೆ.


