ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಮಾಣಿಕ್ಯಧಾರಾ ಜಲಪಾತದ ಬಳಿ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳದ 14 ವರ್ಷದ ಬಾಲಕಿ ಶ್ರೀನಂದಾ ಮೃತದೇಹ 2000 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ.
40 ಜನರ ಪ್ರವಾಸಿ ತಂಡದಲ್ಲಿ ಕುಟುಂಬದೊಂದಿಗೆ ಚಾರಣಕ್ಕೆ ಬಂದಿದ್ದ ಆಕೆ ಏಪ್ರಿಲ್ 7 ರಂದು ಕಾಣೆಯಾಗಿದ್ದರು. ಎಸ್.ಡಿ.ಆರ್.ಎಫ್ ಮತ್ತು ಪೊಲೀಸ್ ತಂಡಗಳ ತೀವ್ರ ಶೋಧ ನೆಸಿತ್ತು. ದಟ್ಟ ಅರಣ್ಯ ಮತ್ತು ಕಡಿದಾದ ಪರ್ವತ ಪ್ರದೇಶವಾದ್ದರಿಂದ ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಬಳಸಲಾಗಿತ್ತು. ಏಪ್ರಿಲ್ 10 ರಂದು ಮೃತದೇಹ ಸಿಕ್ಕಿದ್ದು, ತನಿಖೆ ಮುಂದುವರಿದಿದೆ.
ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಶ್ರೀ ನಂದಾ ತಾಯಿ ತನ್ನ ಮಗಳನ್ನು ಯಾರೋ ಅಪಹರಿಸಿರುವ ಅನುಮಾನವಿದೆ, ಹುಡುಕಿ ಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದರು.
ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯಾ (36) 4 ದಿನಗಳ ಶೋಧದ ನಂತರ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಅರಣ್ಯ ಪ್ರದೇಶದೊಳಗೆ ದಾರಿ ತಪ್ಪಿದ್ದ ಅವರು, ನೀರು ಕುಡಿದು ಪಾಳು ಬಿದ್ದ ಬಂಗಲೆಯಲ್ಲಿ ಆಶ್ರಯ ಪಡೆದಿದ್ದರು.
ಅವರು ಪತ್ತೆಯಾದ ಬಳಿಕ ಆ ಪ್ರಕರಣದ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿವೆ, ಆಕೆ ಬೇಕೆಂದೇ ನಾಪತ್ತೆಯಾಗಿರಬಹುದು, ನಕ್ಸಲರ ಲಿಂಕ್ ಇರಬಹುದು, ಸೂಕ್ತ ತನಿಖೆ ನಡೆಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಬೇಕೆಂದೇ ನಾಪತ್ತೆ ಆಗಿದ್ದರೆ ಹುಡುಕಾಟದ ವೆಚ್ಚವನ್ನು ಆಕೆಯಿಂದ ವಸೂಲಿ ಮಾಡಬೇಕು, ಮೂರು ದಿನ ಕಾಡಲ್ಲಿ ಕಳೆದ ಆಕೆಗೆ ಬಳಲಿಕೆ ಆಗಿಲ್ಲ, ಗಾಯ ಆಗಿಲ್ಲ,ಹೀಗಿರುವಾಗ ಆಕೆ ಕಾಣೆಯಾಗಿರುವ ಬಗ್ಗೆ ಅನುಮಾನವಿದೆ ಎಂಬ ಮಾತುಗಳು ಹರಿದಾಡುತ್ತಿವೆ.


