ಅಂಗನವಾಡಿಯಲ್ಲಿ ಉಪ್ಪಿಟ್ಟು ಕೊಡುವ ಬದಲು ಬಿರಿಯಾನಿ ಮತ್ತು ಚಿಕನ್ ಫ್ರೈ ಕೊಡುವಂತೆ ಬಾಲಕ ಮನವಿ ಮಾಡಿದ ವೀಡಿಯೋ ವೈರಲ್ ಆಗಿದ್ದು, ಕೇರಳ ಸರ್ಕಾರ ಪ್ರತಿಕ್ರಿಯೆ ನೀಡಿದೆ.
ಬಾಲಕನ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರತಿಕ್ರಿಯಿಸಿದ್ದು, ಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದ ಮೆನು ಪರಿಶೀಲಿಸಿ ಪರಿಷ್ಕರಿಸುವುದಾಗಿ ಭರವಸೆ ನೀಡಿದ್ದಾರೆ.
ಶಂಕು ಎಂಬ ಪುಟ್ಟ ಬಾಲಕ ಊಟದ ಮೆನುವಿನಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಚಿಕನ್ ಫ್ರೈ ನೀಡಬೇಕು ಎಂದು ಮಾಡಿದ ಮನವಿಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಅಂಗನವಾಡಿಯಲ್ಲಿ ರುಚಿಕರ ಊಟ ಬೇಕು ಎಂದು ಕೇಳಿಕೊಂಡಿರುವ ಶಂಕುವಿನ ವೀಡಿಯೊ ಜನವರಿ 30 ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆಗಿದ್ದು, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿತ್ತು.
ಕೇರಳದಲ್ಲಿ ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲು ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಪೋಷಣೆಗೆ ಪೂರಕವಾಗಿ ಊಟ ನೀಡಲಾಗುತ್ತಿದೆ. ಮೊಟ್ಟೆ ಮತ್ತು ಹಾಲನ್ನು ಸಹ ಸರ್ಕಾರ ನೀಡುತ್ತಿದೆ. ಮಕ್ಕಳು ಪೌಷ್ಟಿಕ ಆಹಾರದಿಂದ ಆರೋಗ್ಯದ ಪ್ರಯೋಜನ ಪಡೆಯಲು ಸಹಕಾರಿಯಾಗಿದೆ.