ಕೆಂಪೇಗೌಡರು ದಕ್ಷ ಹಾಗೂ ದೂರದೃಷ್ಟಿಯಿದ್ದಂತಹ ಆಡಳಿತಗಾರ. ಆಧುನಿಕ ಬೆಂಗಳೂರಿನ ನಿರ್ಮಾತೃ ಎಂದು ಮುಖ್ಯಮಂತ್ರಿ ಹೇಳಿದರು.
ಬೆಂಗಳೂರಿನ ವಿಧಾನಸೌಧದ ಪೂರ್ವ ದಿಕ್ಕಿನಲ್ಲಿರುವ ನಾಡಪ್ರಭು ಕೆಂಪೇಗೌಡ ರವರ 516 ನೇ ಜಯಂತಿ ಯ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆಂಪೇಗೌಡರ 516ನೇ ಜಯಂತಿಯನ್ನು ಸರ್ಕಾರ, ಕಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಆಚರಿಸಲಾಗುತ್ತಿದೆ. 2013-18 ರ ಅವಧಿಯಲ್ಲಿ ನಮ್ಮ ಸರ್ಕಾರ ನಿರ್ಮಲಾನಂದ ಸ್ವಾಮೀಜಿ ಅವರೊಂದಿಗೆ ಚರ್ಚೆ ಮಾಡಿ ಜನ್ಮದಿನಾಂಕವನ್ನು ತಿಳಿದು, ಅಂದಿನಿಂದ ನಿರಂತರವಾಗಿ ಸರ್ಕಾರ ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡುತ್ತಿದೆ. ಬೆಂಗಳೂರು ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದರೆ ಅದಕ್ಕೆ ಅಡಿಪಾಯ ಹಾಕಿದ್ದು ಕೆಂಪೇಗೌಡರು ಎಂದರು.
ಅವರನ್ನು ಸ್ಮರಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಬೆಂಗಳೂರಿನ ನಾಲ್ಕು ಭಾಗದಲ್ಲಿ ಗೋಪುರಗಳನ್ನು ಕಟ್ಟಿಸಿದ ಕೆಂಪೇಗೌಡರು ಅಂದೇ ಬೆಂಗಳೂರಿನ ಆಡಳಿತ ಹೇಗಿರಬೇಕೆಂದು ಅರಿತು ವೃತ್ತಿ ಆಧಾರಿತವಾಗಿ ನಗರತ್ ಪೇಟೆ, ಚಿಕ್ಕಪೇಟೆ, ಬಳೆಪೇಟೆ ಸೇರಿದಂತೆ ಅನೇಕ ಪೇಟೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ನಿರ್ಮಿಸಿದ್ದರು. ಅವರ ಆಡಳಿತ ನಮಗೆಲ್ಲರಿಗೂ ಮಾದರಿ ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿ ಮಾಡುವ ಕನಸನ್ನು ನನಸು ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಸುಮನಹಳ್ಳಿಯ ಜಗಜೀವನ್ ರಾಮ್ ನಗರದಲ್ಲಿ ಕೆಂಪೇಗೌಡ ಜಯಂತಿ ಆಚರಿಸಲಾಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಮಾನನಿಲ್ದಾಣದ ಬಳಿ ಇರುವ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ ಎಂದು ತಿಳಿಸಿದರು.
ಪಕ್ಷದಲ್ಲಿ ಆಂತರಿಕ ಜಗಳವಿಲ್ಲ
ಪಕ್ಷದಲ್ಲಿ ಆಂತರಿಕ ಜಗಳ ಇರುವ ಬಗ್ಗೆ ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಸಚಿವ ಕೆ.ಎನ್.ರಾಜಣ್ಣ ಅವರು ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಯಾಗಬಹುದು ಎಂದು ಹೇಳಿದ್ದಾರೆ. ಇಂಥದ್ದೇ ಆಗುತ್ತದೆ ಎಂದು ಹೇಳಿಲ್ಲ ಎಂದರು.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಚಿವ ರಾಜಣ್ಣ ಅವರ ಹೇಳಿಕೆಯನ್ನು ಹೇಗೆ ಅರ್ಥೈಸಿಕೊಳ್ಳಬೇಕೆಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಅದನ್ನು ನಿರ್ಲಕ್ಷಿಸುವುದು ಒಳ್ಳೆಯದು ಎಂದು ಹೇಳಿದರು.
ಚಾಮರಾಜನಗರದಲ್ಲಿ ಐದು ಹುಲಿಗಳು ಸಾವಿಗೀಡಾಗಿದ್ದು ಈ ಬಗ್ಗೆ ತನಿಖೆ ಕೈಗೊಳ್ಳಲು ಆದೇಶಿಸಲಾಗಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.