ಕನ್ನಡ ನಾಡಿನ ಜೀವನದಿ ಕಾವೇರಿ ಭಾಗಮಂಡಲದ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ನಿರೀಕ್ಷಿತ ಸಮಯದಲ್ಲಿಯೇ ತೀರ್ಥೋದ್ಭವ ಆಗಿದೆ. ಈ ಮೂಲಕ ಜೀವನದಿ ದರ್ಶನ ನೀಡಿದ್ದಾರೆ.
ಕೊಡಗು ಜಿಲ್ಲೆಯ ಭಾಗಮಂಡಲದ ತಲಕಾವೇರಿಯ ಶ್ರೀ ಭಗಂಡೇಶ್ವರ- ತಲಕಾವೇರಿ ದೇವಾಲಯದ ಪುಷ್ಕರಿಣಿಯಲ್ಲಿ ಶುಕ್ರವಾರ ಮಧ್ಯಾಹ್ನ 1.44ಕ್ಕೆ ಮಕರ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ಆಗಿದೆ.
ಪುರೋಹಿತರು ಕಾವೇರಿ ತೀರ್ಥೋಧ್ವವ ಆಗುತ್ತಿದ್ದಂತೆ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ನಂತರ ಕಾವೇರಿ ನದಿಯ ನೀರನ್ನು ಭಕ್ತರ ಮೇಲೆ ಎರಚಿಸಿದರು. ಈ ಅಪರೂಪದ ದರ್ಶನಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿದ್ದರು.
ಈ ವರ್ಷ ಮಧ್ಯಾಹ್ನದ ಸಮಯದಲ್ಲಿ ತೀರ್ಥೋದ್ಭವ ಆಗಿದ್ದರಿಂದ ಮೈಸೂರು ರಾಜವಂಶಸ್ಥ ಹಾಗೂ ಮೈಸೂರು-ಕೊಡಗು ಸಂಸದ ಯಧುವೀರ್ ಸೇರಿದಂತೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾವೇರಿ ಮಾತೆಯ ದರ್ಶನ ಪಡೆಯಲು ಆಗಮಿಸಿದ್ದರು.
ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ, ಸುತ್ತಲೂ ಬ್ಯಾರಿಕೇಡ್ ಅಳವಡಿಕೆ, ವೇದಿಕೆ ನಿರ್ಮಾಣ, ಮಳೆಯಿಂದ ರಕ್ಷಣೆಗಾಗಿ ಮೆಟಲ್ ಶೀಟ್, ಪೆಂಡಾಲ್‌ಗಳು, ಹೂವಿನ ಅಲಂಕಾರ ಮತ್ತಿತರ ಕೆಲಸ ಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ತೀರ್ಥೋದ್ಭವದ ವೀಕ್ಷಣೆಯ ವೇಳೆ ನೂಕು ನುಗ್ಗಲು ಉಂಟಾಗದಂತೆ ಎಲ್‌ಇಡಿ ಪರದೆಗಳು, ಫೋಟೋಗ್ರಫಿ ಮತ್ತು ಭಕ್ತಾದಿಗಳ ಭದ್ರತೆಯ ದೃಷ್ಟಿಯಿಂದ ಅವಶ್ಯವಿರುವ ಕಡೆಗಳಲ್ಲಿ ಸಿ.ಸಿ. ಕ್ಯಾಮೆರಾಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ.