ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಮ್ ನಡೆದ ಭೀಕರ ದಾಳಿಯಲ್ಲಿ ಭಯೋದ್ಪಾದಕರಿಗೆ ಸಹಾಯ ಮಾಡಿದ ಆರೋಪದ ಮೇಲೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.
“ಗುಪ್ತಚರ ಮಾಹಿತಿ ಆಧಾರದ ಮೇಲೆ ಶ್ರೀನಗರ ಪೊಲೀಸರು ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಿಂದ ಒಬ್ಬ ಓವರ್ ಗ್ರೌಂಡ್ ವರ್ಕರ್ (OGW) ಅನ್ನು ಬಂಧಿಸಿದ್ದಾರೆ. ಆತನನ್ನು ಮೊಹಮ್ಮದ್ ಯೂಸುಫ್ ಕಟಾರಿಯಾ ಎಂದು ಗುರುತಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತನು ಲಷ್ಕರ್-ಎ-ತೈಬಾ (LeT) ಹಾಗೂ ಅದರ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸದಸ್ಯನೆಂದು ಶಂಕಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ‘ಆಪರೇಷನ್ ಮಹಾದೇವ್’ ವೇಳೆ ವಶಪಡಿಸಿಕೊಂಡಿದ್ದ ಶಸ್ತ್ರಾಸ್ತ್ರಗಳ ವಿಶ್ಲೇಷಣೆಯ ನಂತರ ಅವನನ್ನು ಬಂಧಿಸಲಾಯಿತು.
ಕಟಾರಿಯಾ ಒಬ್ಬ ಗುತ್ತಿಗೆ ನೌಕರನಾಗಿದ್ದು, ಸ್ಥಳೀಯ ಮಕ್ಕಳಿಗೆ ಬೋಧನೆ ಮಾಡುತ್ತಿದ್ದ. ಘಟನೆಗೆ ಕೆಲ ತಿಂಗಳುಗಳ ಮುಂಚೆ ಅವನು ಭಯೋತ್ಪಾದಕರ ಸಂಪರ್ಕಕ್ಕೆ ಬಂದು, ಅವರ ಸಂಚಲನಕ್ಕೆ ಸಹಾಯ ಮಾಡುತ್ತಿದ್ದನೆಂದು ವರದಿಯಾಗಿದೆ.
ಪಹಲ್ಗಾಮ್ ದಾಳಿಗೆ ಕಾರಣರಾದ ಮೂವರು ಉಗ್ರರನ್ನು ಸೇನೆಯ ವಿಶೇಷ ಪ್ಯಾರಾ ಕಮಾಂಡೋ ಪಡೆ ಹತ್ಯೆಗೈದಿತ್ತು. ಅವರಲ್ಲಿ ಒಬ್ಬನಾದ ಸುಲೈಮಾನ್ ಅಲಿಯಾಸ್ ಅಸೀಫ್, ಏಪ್ರಿಲ್ 22ರ ದಾಳಿಯ ಮಾಸ್ಟರ್‌ಮೈಂಡ್ ಎಂದು ನಂಬಲಾಗಿದೆ. ಉಳಿದ ಇಬ್ಬರನ್ನು ಜಿಬ್ರಾನ್ ಮತ್ತು ಹಮ್ಜಾ ಆಫ್ಘಾನಿ ಎಂದು ಗುರುತಿಸಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯು ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಬಳಿ 5 ಸಶಸ್ತ್ರ ಇಸ್ಲಾಮಿಕ್ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿದ ದಾಳಿಯಾಗಿದೆ. ಈ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದಾರೆ. ಈ ಘಟನೆ 2008 ರ ಮುಂಬೈ ದಾಳಿಯ ನಂತರ ಭಾರತದಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ.


