ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ದೋಷಪೂರಿತ ಕೆಎಎಸ್ ಪೂರ್ವಭಾವಿ ಪರೀಕ್ಷೆಯ ವಿಚಾರದಲ್ಲಿ ರಾಜ್ಯ ಸರ್ಕಾರ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಮತ್ತು ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
2023-24ನೇ ಸಾಲಿನ ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೆಷನರ್ಸ್ ಪೂರ್ವಭಾವಿ ಪರೀಕ್ಷೆ ಮತ್ತೊಂದು ಬಾರಿ ಡಿಸೆಂಬರ್ 29 ರಂದು ನಡೆದಿದೆ. ಇದರಲ್ಲಿ ಮತ್ತೊಮ್ಮೆ ಲೋಪದೋಷಗಳು ಕಂಡು ಬಂದಿದ್ದರಿಂದ ವಿಚಲಿತರಾಗಿರುವ ಅಭ್ಯರ್ಥಿಗಳು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಮರುಪರೀಕ್ಷೆಯಲ್ಲಿ ಕಂಡು ಬಂದ ಲೋಪದೋಷಗಳ ಬಗ್ಗೆ ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಮರುಪರೀಕ್ಷೆ ನಡೆದು ಹದಿನೈದು ದಿನ ಕಳೆದರೂ ಈವರೆಗೆ ಸರ್ಕಾರವಾಗಲೀ, ಆಯೋಗವಾಗಲೀ ಅಭ್ಯರ್ಥಿಗಳ ಆಕ್ಷೇಪಣೆಗಳಿಗೆ ಉತ್ತರ ನೀಡಿಲ್ಲ. ಲಕ್ಷಾಂತರ ಯುವ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದ್ದಾರೆ.
ಕೆಪಿಎಸ್ಸಿ ಪರೀಕ್ಷೆಯಲ್ಲಾಗಿರುವ ಎಡವಟ್ಟುಗಳು, ಅದರಲ್ಲೂ ಮುಖ್ಯವಾಗಿ ಭಾಷಾಂತರದಲ್ಲಿ ಆಗಿರುವ ಲೋಪದೋಷಗಳ ದುಷ್ಪರಿಣಾಮವನ್ನು ಗ್ರಾಮೀಣ ಭಾಗದ ಯುವಕ ಯುವತಿಯರು ಎದುರಿಸಬೇಕಾಗಿದೆ. ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಕನ್ನಡ ಮಾಧ್ಯಮದಲ್ಲಿ ಶಾಲಾ, ಕಾಲೇಜು ವಿದ್ಯಾಭ್ಯಾಸ ಮಾಡಿರುವ ಸಾವಿರಾರು ಗ್ರಾಮೀಣ ಅಭ್ಯರ್ಥಿಗಳ ಕನಸು ನುಚ್ಚು ನೂರಾಗಿದೆ. ಸರ್ಕಾರ ಮತ್ತೊಮ್ಮೆ ದೋಷರಹಿತವಾಗಿ ಮರುಪರೀಕ್ಷೆ ನಡೆಸಬೇಕು ಅಥವಾ ಮುಖ್ಯಪರೀಕ್ಷೆಗೆ ಹಾಲಿ ಇರುವ 1:15 ಅನುಪಾತದ ಬದಲು 1:50 ಅನುಪಾತದಲ್ಲಿ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಆದರೆ ತಪ್ಪೇ ನಡೆದಿಲ್ಲ ಎನ್ನುವ ಧೋರಣೆಯನ್ನು ಕಾಂಗ್ರೆಸ್ ಸರ್ಕಾರ ತೋರಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎರಡೆರಡು ಬಾರಿ ಪರೀಕ್ಷೆ ನಡೆಸಿದ್ದರಿಂದ ಸರ್ಕಾರದ ಬೊಕ್ಕಸಕ್ಕೆ 25 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚವಾಗಿದೆ. ಆದರೂ ಪರೀಕ್ಷೆ ದೋಷಮುಕ್ತವಾಗಿಲ್ಲವೆಂದರೆ ಇದಕ್ಕೆ ಯಾರು ಹೊಣೆ, ಹೊಣೆಯಾದವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿಸಬೇಕಿತ್ತಲ್ಲವೇ ಎಂದು ಆರ್.ಅಶೋಕ ಪ್ರಶ್ನಿಸಿದ್ದಾರೆ.
ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಮತ್ತು ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.