ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾ ಗ್ರಾಮದಲ್ಲಿ ಊಟ ಮಾಡುತ್ತಿರಬೇಕಾದರೆ ಅನ್ನದ ಅಗಳು ಗಂಟಲಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ. ಅಮಿತ್ ಮಾಳಸೇರ (38) ಮೃತಪಟ್ಟಿರುವ ಯುವಕ.
ಅಮಿತ್ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಅನ್ನದ ಒಂದು ತುತ್ತು ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಉಸಿರಾಟದ ತೊಂದರೆಯಾಗಿ ನರಳಾಡಿದ್ದಾನೆ. ಮನೆಯವರು ತಕ್ಷಣವೇ ನೀರು ಕುಡಿಸಲು ಪ್ರಯತ್ನಿಸಿದರೂ ಆರೋಗ್ಯ ಸ್ಥಿತಿ ಹದಗೆಟ್ಟಿದೆ.
ಕೂಡಲೇ ಆತನನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾನೆ. ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯರು ಊಟದ ವಿಚಾರದಲ್ಲಿ ಬಹಳ ಶಿಸ್ತಿನ ನಿಯಮಗಳನ್ನು ಅನುಸರಿಸುತ್ತಿದ್ದರು. ಊಟವನ್ನು ಕುಳಿತುಕೊಂಡು ತಿನ್ನಬೇಕು, ಆರಾಮವಾಗಿ ಆಹಾರವನ್ನು ಚೆನ್ನಾಗಿ ಅಗಿಯಬೇಕು, ಎಷ್ಟು ಪ್ರಮಾಣದಲ್ಲಿ ಹೇಗೆ
ತಿನ್ನಬೇಕು ಎಂಬ ಕಟ್ಟುನಿಟ್ಟು ಮಾಡಿದ್ದರು. ಆಹಾರವನ್ನು ತಿನ್ನುವಾಗ ಗಡಿಬಿಡಿಯಿಲ್ಲದೆ, ಶಾಂತವಾಗಿ ಗಮನವಿಟ್ಟು ಸೇವಿಸಬೇಕು ಎಂದೂ ಹೇಳುತ್ತಿರುವುದರ ಹಿಂದಿನ ಮಹತ್ವವನ್ನು ಇಂಥ ಘಟನೆಗಳು ಮತ್ತೆ ನೆನಪಿಸುತ್ತವೆ.