ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್ ನೇತೃತ್ವದ ಬೃಹತ್ ರ‍್ಯಾಲಿ ವೇಳೆ ನೂಕುನುಗ್ಗಲು ಉಂಟಾಗಿ 30ಕ್ಕೂ ಹೆಚ್ಚು ಜನ ಮೃತಪಟ್ಟ ಬಳಿಕ ದಳಪತಿ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಮನೆಯ ಸುತ್ತ ಪರಿಶೀಲನೆ ನಡೆಸಿವೆ.
ಚೆನ್ನೈನಲ್ಲಿರುವ ವಿಜಯ್ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಸ್ಥಳೀಯ ಚೆನ್ನೈ ನಗರ ಮತ್ತು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಮನೆಯ ಸುತ್ತ ನಿಯೋಜಿಸಲಾಗಿದೆ. ಶನಿವಾರ ಮಧ್ಯರಾತ್ರಿಯಿಂದಲೇ ವಿಜಯ್ ಅವರ ನಿವಾಸಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ವಿಜಯ್ ಕರೂರು ಜಿಲ್ಲಾ ಕೇಂದ್ರದ 2 ಕಿ.ಮೀ. ದೂರದ ವೇಲುಸ್ವಾಮಿಪುರಂನ ಹೆದ್ದಾರಿಯಲ್ಲಿ ಚುನಾವಣಾ ರ‍್ಯಾಲಿ ಹಮ್ಮಿಕೊಂಡಿದ್ದಾಗ ಶನಿವಾರ ರಾತ್ರಿ ಏಕಾಏಕಿ ಕಾಲ್ತುಳಿತ ಸಂಭವಿಸಿ ೪೦ ಜನ ಮೃತಪಟ್ಟಿದ್ದಾರೆ. ಮೃತರಲ್ಲಿ 28 ಜನ ಕರೂರು ಜಿಲ್ಲೆಯವರು, ಉಳಿದವರು ಈರೋಡ್, ತಿರುಪುರ, ಧಾರಾಪುರಂ, ಸೇಲಂ ಜಿಲ್ಲೆಯವರು.
40 ಮೃತಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಅಸು ನೀಗಿರುವುದು ದೃಢಪಟ್ಟಿದೆ. ಮೃತರ ಕುಟುಂಬಗಳಿಗೆ ವಿಜಯ್ 20 ಲಕ್ಷ, ಗಾಯಾಳುಗಳಿಗೆ 2 ಲಕ್ಷ ಪರಿಹಾರ ಘೋಷಿಸಿದ್ದು, ಸಿಎಂ ಸ್ಟಾಲಿನ್ ಮೃತರ ಕುಟುಂಬಗಳಿಗೆ 10 ಲಕ್ಷ ಹಾಗೂ ಗಾಯಾಳುಗಳಿಗೆ 1 ಲಕ್ಷ ಘೋಷಿಸಿದ್ದಾರೆ. ಪ್ರಧಾನಿ ಮೋದಿ ಮೃತರಿಗೆ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ಪರಿಹಾರ ಪ್ರಕಟಿಸಿದ್ದಾರೆ. ತಮಿಳುನಾಡು ಬಿಜೆಪಿ 1 ಲಕ್ಷ ಪರಿಹಾರ ಘೋಷಿಸಿದೆ.
ಕಾಲ್ತುಳಿತದಲ್ಲಿ ಗಾಯಾಳುಗಳ ಸಂಖ್ಯೆ 150ಕ್ಕೆ ಏರಿದೆ. ಕರೂರು, ತಿರುಚ್ಚಿ ಸರ್ಕಾರಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವವರಿಗೆ ಉನ್ನತ ಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸ್ಟಾಲಿನ್ ಸೂಚನೆ ನೀಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅವರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ.