ಬೆಂಗಳೂರು: ಕರ್ನಾಟಕದ ಮಾಜಿ ಪೊಲೀಸ್ ಮುಖ್ಯಸ್ಥ ಓಂಪ್ರಾಶ್ ಬೆಂಗಳೂರಿನ ತಮ್ಮ ಮನೆಯಲ್ಲಿಯೇ ಭೀಕರವಾಗಿ ಹತ್ಯೆ ಆಗಿದ್ದು, ಅವರಿಗೆ 68 ವರ್ಷ ವಯಸ್ಸಾಗಿತ್ತು.
ನಗರದ ಎಚ್ ಎಸ್ ಆರ್ ಲೇಔಟ್ ನಲ್ಲಿರುವ ತಮ್ಮ ಮನೆಯಲ್ಲಿ ವಾಸವಾಗಿದ್ದ ಓಂಪ್ರಕಾಶ್ ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಶವ ಪತ್ತೆಯಾದ ಜಾಗದ ಸುತ್ತಮುತ್ತ ಕೂಡ ರಕ್ತ ಚೆಲ್ಲಾಡಿದೆ.
1981ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಆಗಿದ್ದ ಓಂಪ್ರಕಾಶ್, 2015ರಲ್ಲಿ ರಾಜ್ಯದ 38ನೇ ಐಜಿ- ಡಿಜಿಪಿ ಆಗಿ ಕಾರ್ಯ ನಿರ್ವಹಿಸಿದ್ದರು.
ಓಂಪ್ರಕಾಶ್ ಅವರನ್ನು ಪತ್ನಿಯೇ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಪತ್ನಿ ಮೂರು ದಿನಗಳ ಹಿಂದೆ ವಾಟ್ಸಪ್ ಗ್ರೂಪ್ ನಲ್ಲಿ ಹಾಕಿದ ಸಂದೇಶ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ. ಅಲ್ಲದೇ ಈಕೆ ಮಾನಸಿಕ ಅಸ್ವಸ್ಥರಾಗಿದ್ದರು ಎಂದು ಹೇಳಲಾಗಿದೆ.
ಬಿಹಾರದ ಚಂಪಾರಣ್ ಜಿಲ್ಲೆಯ ಓಂಪ್ರಕಾಶ್, ಬಳ್ಳಾರಿಯ ಹರಪನಹಳ್ಳಿ ಉಪವಿಭಾಗದ ಎಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ನಂತರ, ರಾಜ್ಯ ಜಾಗೃತ ಆಯೋಗ ಮತ್ತು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ಮತ್ತು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಎಸ್ಪಿಯಾಗಿ ಬಡ್ತಿ ಪಡೆದ್ದರು.
1993 ರಲ್ಲಿ ಭಟ್ಕಳ ಕೋಮು ಗಲಭೆಗಳನ್ನು ನಿರ್ವಹಿಸಲು ಅವರನ್ನು ಆಯ್ಕೆ ಮಾಡಲಾಗಿತ್ತು. ಅವರು ಡಿಐಜಿ (ಆಡಳಿತ), ಡಿಐಜಿ-ಉತ್ತರ ವಲಯ, ಡಿಐಜಿ-ತರಬೇತಿ ಮತ್ತು ಡಿಐಜಿ ಅಗ್ನಿಶಾಮಕ ದಳದವರಾಗಿದ್ದರು. ಐಜಿಪಿಯಾಗಿ, ಅವರನ್ನು ಸಿಐಡಿಯಲ್ಲಿ ನೇಮಿಸಲಾಗಿತ್ತು. ಮತ್ತು ಸಾರಿಗೆ ಆಯುಕ್ತರಾಗಿಯೂ ಕೆಲಸ ಮಾಡಿದ್ದರು. ಅವರು ಎಡಿಜಿಪಿ (ಅಪರಾಧ ಮತ್ತು ತಾಂತ್ರಿಕ ಸೇವೆಗಳು) ಮತ್ತು ಎಡಿಜಿಪಿ (ಕುಂದುಕೊರತೆಗಳು ಮತ್ತು ಮಾನವ ಹಕ್ಕುಗಳು) ಆಗಿದ್ದರು.