ಭೂಸ್ವಾಧೀನ ವಿರೋಧಿಸಿ ರೈತರು ಮಾಡಿದ ಆಗ್ರಹವನ್ನು ಗೌರವಿಸಿದ ಕರ್ನಾಟಕ ರಾಜ್ಯ ಸರ್ಕಾರವು ದೇವನಹಳ್ಳಿಯ ಚನ್ನರಾಯಪಟ್ಟಣ ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸಿರುವ ಬೆನ್ನಲ್ಲೇ ಏರೋಸ್ಪೇಸ್ ಉದ್ಯಮಿಗಳಿಗೆ ಆಂಧ್ರ ಸಿಎಂ ಪುತ್ರ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಬಹಿರಂಗ ಆಹ್ವಾನ ನೀಡಿದ್ದಾರೆ.
1,777 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್‌ನ್ನು ಕರ್ನಾಟಕ ಸರ್ಕಾರ ರದ್ದು ಮಾಡಿದೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ನಾರಾ ಲೋಕೆಶ್, ಈ ವಿಚಾರ ಕೇಳಿ ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇನ್ನೊಂದು ಉತ್ತಮ ಉಪಾಯ ಇದೆ. ನೀವು ಆಂಧ್ರಪ್ರದೇಶದಲ್ಲಿ ಏಕೆ ಜಾಗ ನೋಡಬಾರದು, ಪ್ರೋತ್ಸಾಹ ಧನ ಮತ್ತು 8000 ಎಕರೆಗಳಿಗೂ ಹೆಚ್ಚು ಭೂಮಿ ನಿಮಗಾಗಿ ಸಿದ್ಧವಿದೆ. ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಿ, ಚರ್ಚಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರು, ಹೋರಾಟಗಾರರು, ಸಂಘಟನೆಗಳ ಸಭೆಯಲ್ಲಿ ನೋಟಿಫಿಕೇಶನ್ ರದ್ದು ಮಾಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1,777 ಎಕರೆ ಜಮೀನು ಭೂಸ್ವಾಧೀನಕ್ಕೆ ಸರ್ಕಾರ ನೋಟಿಫಿಕೇಶನ್ ಹೊರಡಿಸಿತ್ತು. ಕೃಷಿ ಭೂಮಿ ಭೂಸ್ವಾಧೀನ ಮಾಡದಂತೆ ರೈತರು ಹೋರಾಟ ಮಾಡುತ್ತಿದ್ದರು. ಕೃಷಿ ಚಟುವಟಿಕೆ ಮುಂದುವರೆಸುವ ದೃಷ್ಟಿಯಿಂದ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನ ರದ್ದು ಮಾಡುತ್ತಿರುವುದಾಗಿ ತಿಳಿಸಿದ್ದರು.
ರೈತರು ಸ್ವಯಂ ಪ್ರೇರಿತರಾಗಿ ಜಮೀನು ಕೊಟ್ಟರೆ ಆ ಭೂಮಿಯನ್ನು ಸರ್ಕಾರ ಪಡೆಯಲಿದೆ. ಸೂಕ್ತ ಪರಿಹಾರ ಕೊಡುವ ಜೊತೆಗೆ ಅಭಿವೃದ್ಧಿಪಡಿಸಿದ 50% ಭೂಮಿಯನ್ನು ಜಮೀನು ಕೊಡುವ ರೈತರಿಗೆ ಕೊಡಲಾಗುತ್ತದೆ. ಸರ್ಕಾರದ ಈ ನಿರ್ಧಾರ ದೇವನಹಳ್ಳಿ ಜಮೀನಿಗೆ ಮಾತ್ರ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದ್ದರು.