ಕರ್ತವ್ಯ (KAAMS) ಎಂಬುದು ಕರ್ನಾಟಕ ಸರ್ಕಾರದ ಒಂದು ಸಂಯೋಜಿತ, ಕೃತಕ ಬುದ್ಧಿಮತ್ತೆ (AI) ಆಧಾರಿತ ಹಾಜರಾತಿ ನಿರ್ವಹಣಾ ವೇದಿಕೆ. ರಾಜ್ಯದ ಎಲ್ಲ ಕಚೇರಿಗಳಲ್ಲಿ ಇದರ ಯಶಸ್ವಿ ಅನುಷ್ಠಾನಕ್ಕಾಗಿ ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ಅವಾರ್ಡ್ ಲಭಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಅಡಿಯಲ್ಲಿ ಬರುವ ಇ-ಆಡಳಿತ ಕೇಂದ್ರವು (CeG) ಸ್ವತಂತ್ರವಾಗಿ ಅಭಿವೃದ್ಧಿಪಡಿಸಿದೆ. ಇದು ಪೂರ್ಣ ಪ್ರಮಾಣದಲ್ಲಿ HRMS ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಾದ್ಯಂತ 1.3 ಲಕ್ಷ ಉದ್ಯೋಗಿಗಳು ಈಗಾಗಲೇ ‘ಕರ್ತವ್ಯ’ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಕರ್ತವ್ಯದ ವೈಶಿಷ್ಟ್ಯಗಳು ಹೀಗಿವೆ, AI-ಆಧಾರಿತ (Liveness detection ತಂತ್ರಜ್ಞಾನದೊಂದಿಗೆ ಮುಖ ಗುರುತಿಸುವಿಕೆ ವ್ಯವಸ್ಥೆ. GIS-ಆಧಾರಿತ ಜಿಯೋಫೆನ್ಸಿಂಗ್ ಭೌಗೋಳಿಕ ಗಡಿ ಗುರುತಿಸುವಿಕೆ. ಮೊಬೈಲ್ ಅಪ್ಲಿಕೇಶನ್: ಕ್ಷೇತ್ರ ಸಿಬ್ಬಂದಿ ಮತ್ತು ಕಚೇರಿ ಸಿಬ್ಬಂದಿಗಾಗಿ ಆಂಡ್ರಾಯ್ಡ್ ಮತ್ತು ಐಒಎಸ್ (iOS) ಆವೃತ್ತಿಗಳು ಲಭ್ಯವಿವೆ. ಎಲ್ಲಾ ಆಡಳಿತಾತ್ಮಕ ಹಂತಗಳಲ್ಲಿ ನೈಜ-ಸಮಯದ ಮೇಲ್ವಿಚಾರಣೆಗಾಗಿ ವ್ಯವಸ್ಥೆ.
ಗವರ್ನೆನ್ಸ್ ನೌ (Governance Now) – ಡಿಜಿಟಲ್ ಟ್ರಾನ್ಸ್‌ಫರ್ಮೇಷನ್ ಶೃಂಗಸಭೆ ಮತ್ತು ಪ್ರಶಸ್ತಿಗಳು 2025 ರಲ್ಲಿ, ಕರ್ತವ್ಯ ವ್ಯವಸ್ಥೆಗೆ “ಬಯೋಮೆಟ್ರಿಕ್ ತಂತ್ರಜ್ಞಾನ, ಗುರುತು, ದೃಢೀಕರಣ ಮತ್ತು ಮುಖ ಗುರುತಿಸುವಿಕೆ ವ್ಯವಸ್ಥೆಗಳ ಅತ್ಯುತ್ತಮ ಬಳಕೆ” ವಿಭಾಗದ ಅಡಿಯಲ್ಲಿ ‘ಅತ್ಯುತ್ತಮ ಪ್ರಶಸ್ತಿ’ (Award of Excellence) ನೀಡಿ ಗೌರವಿಸಲಾಗಿದೆ. ಇದು ಕರ್ನಾಟಕವನ್ನು AI-ಚಾಲಿತ ಮತ್ತು ಗುರುತಿನ-ಆಧಾರಿತ ಆಡಳಿತ ಮೂಲಸೌಕರ್ಯದಲ್ಲಿ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದನ್ನಾಗಿ ಮಾಡಿದೆ.
ಸಚಿವಾಲಯದಿಂದ ಹಿಡಿದು ಕ್ಷೇತ್ರ ಕಚೇರಿಗಳವರೆಗೆ ರಾಜ್ಯಾದ್ಯಂತ ನೈಜ-ಸಮಯದ (Real-time) ಹಾಜರಾತಿ ಲಭ್ಯತೆಯು ಮೇಲ್ವಿಚಾರಣೆ, ಶಿಸ್ತು ಮತ್ತು ಸೇವಾ ವಿತರಣೆಯನ್ನು ಬಲಪಡಿಸುತ್ತದೆ. Liveness detection ನಿಂದ ಕೂಡಿದ AI-ಆಧಾರಿತ ಮುಖ ಗುರುತಿಸುವಿಕೆ ಮತ್ತು GIS ದೃಢೀಕರಣವು, ನಕಲಿ ಹಾಜರಾತಿ ಮತ್ತು ದಾಖಲೆಗಳ ದುರುಪಯೋಗವನ್ನು ತಡೆಯುತ್ತದೆ. ಇದು ಹಸ್ತಕ್ಷೇಪ ಮಾಡಲಾಗದ ಮತ್ತು ಲೆಕ್ಕಪರಿಶೋಧನೆಗೆ ಸೂಕ್ತವಾದ ದತ್ತಾಂಶವನ್ನು ಖಚಿತಪಡಿಸುತ್ತದೆ.
ಖಾಸಗಿ ಮಾಲೀಕತ್ವದ ಬಯೋಮೆಟ್ರಿಕ್ ಹಾರ್ಡ್‌ವೇರ್ ಮತ್ತು ದೀರ್ಘಕಾಲದ ನಿರ್ವಹಣಾ ಒಪ್ಪಂದಗಳನ್ನು ಹಂತಹಂತವಾಗಿ ತೆಗೆದುಹಾಕುವುದರಿಂದ ಆವರ್ತಕ ವೆಚ್ಚಗಳು ಕಡಿಮೆಯಾಗುತ್ತವೆ. ಇದು ನಿರ್ದಿಷ್ಟ ವೆಂಡರ್‌ಗಳ ಮೇಲಿನ ಅವಲಂಬನೆ ತಪ್ಪಿಸಿ ಆರ್ಥಿಕ ದಕ್ಷತೆಯನ್ನು ಹೆಚ್ಚಿಸುತ್ತದೆ.
HRMS ನೊಂದಿಗೆ ಸಂಯೋಜಿತಗೊಂಡ ರಜೆ ಮತ್ತು ಇತರ ಕರ್ತವ್ಯ (OOD) ಅನುಮೋದನೆ ಪ್ರಕ್ರಿಯೆಗಳು ಮಾನವ ಸಂಪನ್ಮೂಲ ಕಾರ್ಯಗಳನ್ನು ಸರಳಗೊಳಿಸುತ್ತವೆ. ಹಸ್ತಚಾಲಿತ ಕೆಲಸದ ಹೊರೆಯನ್ನು ಕಡಿಮೆ ಮಾಡಿ ನಿಖರ ಹಾಜರಾತಿ, ವೇತನ ಪಾವತಿ ಮತ್ತು ಸಿಬ್ಬಂದಿ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ. ಸರ್ಕಾರದ ಸ್ವಂತ ಮಾಲೀಕತ್ವದ ವೇದಿಕೆಯಾಗಿರುವುದರಿಂದ, ‘ಕರ್ತವ್ಯ’ ವ್ಯವಸ್ಥೆಯು ಸುಲಭವಾಗಿ ವಿಸ್ತರಿಸಬಹುದಾದ, ಅಗತ್ಯಕ್ಕೆ ತಕ್ಕಂತೆ ಬದಲಾಯಿಸಬಹುದಾದ ಮತ್ತು ಇತರ ರಾಜ್ಯಗಳೂ ಅನುಕರಿಸಬಹುದಾದ ಮಾದರಿಯಾಗಿದೆ. ಇದು ಡಿಜಿಟಲ್ ಆಡಳಿತದಲ್ಲಿ ಕರ್ನಾಟಕದ ಮುಂಚೂಣಿ ಸ್ಥಾನ ಭದ್ರಪಡಿಸುತ್ತದೆ.
ಕರ್ತವ್ಯ (KAAMS) ಕೇವಲ ಒಂದು ಸ್ವತಂತ್ರ ಐಟಿ ವ್ಯವಸ್ಥೆಯಲ್ಲ, ಬದಲಿಗೆ ಇದು ಆಡಳಿತ ಸುಧಾರಣೆಯ ಒಂದು ಪ್ರಮುಖ ಉಪಕ್ರಮ. ನಿಖರವಾದ, ನೈಜ-ಸಮಯದ ಮತ್ತು ಸುರಕ್ಷಿತ ಹಾಜರಾತಿ ದತ್ತಾಂಶವನ್ನು ಸಾಂಸ್ಥೀಕರಿಸುವ ಮೂಲಕ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುತ್ತದೆ. ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳಲು ಬೆಂಬಲ ನೀಡುತ್ತದೆ ಮತ್ತು ಸಾರ್ವಜನಿಕ ಉದ್ಯೋಗಿ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರದ ಡಿಜಿಟಲ್ ರೂಪಾಂತರದ ಕಾರ್ಯಸೂಚಿಯನ್ನು ಮುನ್ನಡೆಸುತ್ತದೆ.


