ಬೆಂಗಳೂರು: ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸಂಖ್ಯೆಯಲ್ಲಿ ಕುಸಿತ ಆಗಿದ್ದರೂ ಅಂಕಿ ಅಂಶಗಳ ಪ್ರಕಾರ ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ.
2023-24 ರಿಂದ 2025-26ರ ನವೆಂಬರ್ವರೆಗೆ 2,809 ರೈತರು ಆತ್ಮಹತ್ಯೆಯ ಮೊರೆ ಹೋಗಿದ್ದಾರೆ. ಕೃಷಿ ಇಲಾಖೆ ನೀಡಿದ ಅಂಕಿ – ಅಂಶದಂತೆ 2023-2024ರಲ್ಲಿ ರಾಜ್ಯದಲ್ಲಿ 1,254 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2024-25ನೇ ಸಾಲಿನಲ್ಲಿ 1,178 ಹಾಗೂ 2025-26ನೇ ಸಾಲಿನ ನವೆಂಬರ್ವರೆಗೆ 377 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.
2023-24ನೇ ಸಾಲಿನಲ್ಲಿ ವರದಿಯಾಗಿರುವ 1,254 ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ ಸುಮಾರು 164 ಪ್ರಕರಣಗಳು ವೈಯಕ್ತಿಕ ಉದ್ದೇಶ ಸೇರಿ ಇತರ ಉದ್ದೇಶದಿಂದ ತಿರಸ್ಕೃತವಾಗಿವೆ. 1,090 ಪ್ರಕರಣಗಳು ಪರಿಹಾರಕ್ಕೆ ಅರ್ಹ ಪ್ರಕರಣ ಎಂದು ಪರಿಗಣಿಸಲಾಗಿತ್ತು.
2024-25 ಸಾಲಿನಲ್ಲಿ ವರದಿಯಾಗಿರುವ 1,178 ಪ್ರಕರಣಗಳ ಪೈಕಿ ಸುಮಾರು 156 ಪ್ರಕರಣಗಳು ತಿರಸ್ಕೃತವಾಗಿದ್ದು, 1,022 ಪ್ರಕರಣಗಳನ್ನು ಪರಿಹಾರ ನೀಡಲು ಅರ್ಹ ಪ್ರಕರಣಗಳೆಂದು ತೀರ್ಮಾನಿಸಲಾಗಿದೆ. ಇನ್ನು 2025-26ನೇ ಸಾಲಿನಲ್ಲಿ ನವೆಂಬರ್ 15ರವರೆಗೆ ವರದಿಯಾದ 377 ಪ್ರಕರಣಗಳ ಪೈಕಿ 46 ತಿರಸ್ಕೃತವಾಗಿದೆ. ಇನ್ನು 331 ಪರಿಹಾರ ಯೋಗ್ಯ ಪ್ರಕರಣ ಎಂದು ತೀರ್ಮಾನಿಸಲಾಗಿದೆ.
ಕೃಷಿ ಇಲಾಖೆ ನೀಡಿದ ಅಂಕಿ – ಅಂಶದಂತೆ ಪ್ರತಿ ವರ್ಷವೂ ಹಾವೇರಿ, ಬೆಳಗಾವಿ, ಧಾರವಾಡ, ಕಲಬುರ್ಗಿ, ಮೈಸೂರು, ಬೀದರ್ ಜಿಲ್ಲೆಗಳು ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುತ್ತವೆ.
ಕಳೆದ ಎರಡೂವರೆ ವರ್ಷಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ 297 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿವೆ. ಬೆಳಗಾವಿಯಲ್ಲಿ ಸುಮಾರು 260 ಆತ್ಮಹತ್ಯೆ ಪ್ರಕರಣಗಳು, ಕಲಬುರ್ಗಿಯಲ್ಲಿ 234 ಪ್ರಕರಣಗಳು, ಧಾರವಾಡದಲ್ಲಿ 195 ಪ್ರಕರಣಗಳು, ಮೈಸೂರಲ್ಲಿ 190, ಬೀದರ್ ನಲ್ಲಿ ಸುಮಾರು 159, ಹಾಸನದಲ್ಲಿ ಸುಮಾರು 118 ಹಾಗೂ ಮಂಡ್ಯದಲ್ಲಿ ಸುಮಾರು 115 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ.


