ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಅವರ ರ‍್ಯಾಲಿಯಲ್ಲಿ ಉಂಟಾದ ಕಾಲ್ತುಳಿತದಲ್ಲಿ 35ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಕರ್ನಾಟಕದಲ್ಲೂ ರಾಜಕೀಯ ಅಲೆಗಳನ್ನು ಎಬ್ಬಿಸಿದ್ದು, ಇತ್ತೀಚೆಗೆ ಕರ್ನಾಟಕದಲ್ಲೂ ನಡೆದ ಕಾಲ್ತುಳಿತದ ನೆನಪುಗಳನ್ನು ಜೀವಂತಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಪ್ರಮುಖ ರಾಜಕೀಯ ನಾಯಕರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೂರಿನ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಿಂದ ದುಃಖಿತನಾಗಿದ್ದೇನೆ ಎಂದು ಹೇಳಿದ್ದಾರೆ.
ತಮಿಳುನಾಡಿನ ಕರೂರಿನ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಿಂದ ದುಃಖಿತನಾಗಿದ್ದೇನೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ಮೆರವಣಿಗೆ ಸಂದರ್ಭದಲ್ಲಿ ಸಂಭವಿಸಿರುವ ದುರಂತದಲ್ಲಿ ಅನೇಕರು ಧಾರುಣ ಸಾವನ್ನಪ್ಪಿ, ಇನ್ನೂ ಅನೇಕರು ತೀವ್ರವಾಗಿ ಗಾಯಗೊಂಡಿರುವ ವಿಷಯ ತಿಳಿದು ತೀವ್ರ ಆಘಾತ ಉಂಟಾಯಿತು. ಇದು ಅತ್ಯಂತ ದುಃಖಕರ ಘಟನೆ. ಮೃತರ ಕುಟುಂಬಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಈ ಪ್ರಾಣ ನಷ್ಟವನ್ನು ಭರಿಸುವ ಶಕ್ತಿ ಅವರಿಗೆ ಸಿಗಲಿ ಹಾಗೂ ಮೃತರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ. ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ರಾಜಕೀಯ ನಾಯಕರು ಹಾಗೂ ಸರ್ಕಾರಗಳಿಗೆ ಜನರ ಸುರಕ್ಷತೆ ಬಗೆಗಿನ ತಾತ್ಸಾರ, ಅಸಡ್ಡೆಯಿದ್ದಾಗ ತಮಿಳುನಾಡಿನಂತಹ ದುರ್ಘಟನೆಗಳು ಸಂಭವಿಸಲಿದೆ. ಬೆಂಗಳೂರಿನ ಕಾಲ್ತುಳಿತದ ದುರಂತ ಘಟನೆ ಮಾಸುವ ಮುನ್ನವೇ ತಮಿಳುನಾಡಿನಲ್ಲಿ ರಣಭೀಕರ ರೀತಿಯಲ್ಲಿ ಮತ್ತೆ ಕಾಲ್ತುಳಿತ ಘಟಿಸಿ ಸಾವು-ನೋವಿನ ದುರಂತ ಸಂಭವಿಸಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ತಮಿಳುನಾಡಿನಲ್ಲಿ ಚಲನಚಿತ್ರ ನಟರೊಬ್ಬರ ರಾಜಕೀಯ ರ‍್ಯಾಲಿಯಲ್ಲಿ ಸಂಭವಿಸಿರುವ ಕಾಲ್ತುಳಿತ ಘಟನೆಯಿಂದ 38 ಕ್ಕೂ ಹೆಚ್ಚು ಜನ ಮೃತಪಟ್ಟು, ಸಾವಿರಾರು ಜನ ಗಾಯಗೊಂಡು ಅಸ್ವತ್ತಗೊಂಡಿರುವ ಘಟನೆ ಅತ್ಯಂತ ಆಘಾತಕಾರಿ ದುರ್ಘಟನೆಯಾಗಿದೆ. ಇಂತಹ ಘಟನೆಗಳು ಪದೇ ಪದೇ ಘಟಿಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದರ ನೇರ ಹೊಣೆಯನ್ನು ತಮಿಳುನಾಡು ಸರ್ಕಾರ ಹಾಗೂ ರ‍್ಯಾಲಿ ಆಯೋಜಿಸಿದ ಮುಖಂಡರು ಹೊರಬೇಕಾಗುತ್ತದೆಯಲ್ಲದೇ, ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ನೆಲಕಚ್ಚಿರುವುದನ್ನು ಈ ಘಟನೆ ಸಾಕ್ಷೀಕರಿಸಿದೆ. ರಾಜಕೀಯ ವ್ಯವಸ್ಥೆಯೊಂದು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಮನುಷ್ಯ ಜೀವಗಳೊಂದಿಗೆ ಚೆಲ್ಲಾಟವಾಡಿರುವುದು ನಾಚಿಕೆಗೇಡಿನ ಪರಮಾವಧಿಯಾಗಿದೆ. ಈ ಘಟನೆಯ ಕುರಿತು ಪಾರದರ್ಶಕ ತನಿಖೆ ನಡೆಯಲಿ ಎಂದು ಒತ್ತಾಯಿಸುವೆ ಎಂದು ಹೇಳಿದ್ದಾರೆ
ಈ ದುರ್ಘಟನೆಯಲ್ಲಿ ಪ್ರಾಣಕಳೆದುಕೊಂಡ ಅಮಾಯಕರಿಗೆ ಸಂತಾಪ ಕೋರುವೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ದಯಾಪಾಲಿಸಲಿ. ಈ ಕೂಡಲೇ ಮೃತ ಕುಟುಂಬಗಳಿಗೆ ಹಾಗೂ ಗಾಯಾಳುಗಳಿಗೆ ತಮಿಳುನಾಡು ಸರ್ಕಾರ ಹಾಗೂ ಕಾರ್ಯಕ್ರಮದ ಆಯೋಜಕರು ಸೂಕ್ತ ಪರಿಹಾರ ಒದಗಿಸಲಿ ಎಂದಿದ್ದಾರೆ