ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮತ್ತು ಶಾಸಕ ಮಂಜುನಾಥ್ ಭಂಡಾರಿ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಪ್ರತಿಷ್ಠಿತ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ, ಗ್ರಾಮೀಣ ಭಾಗದ ಆರೋಗ್ಯ ಸುಧಾರಣೆ ಮತ್ತು ತಂತ್ರಜ್ಞಾನ ವಲಯದಲ್ಲಿ ಕರ್ನಾಟಕದೊಂದಿಗೆ ಸಹಭಾಗಿತ್ವ ವಹಿಸುವ ಕುರಿತು ಪ್ರಮುಖ ಮಾತುಕತೆ ನಡೆಸಿದೆ. ಈ ಭೇಟಿಯು ಕರ್ನಾಟಕದ ವೈದ್ಯಕೀಯ ಮತ್ತು ಐಟಿಬಿಟಿ ಕ್ಷೇತ್ರಗಳಿಗೆ ಹೊಸ ದಿಕ್ಕನ್ನು ನೀಡುವ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸಂಶೋಧನೆಗಳು
ನಿಯೋಗವು ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್‌ಗಳಾದ ಅನುರಾಗ್ ಮತ್ತು ನಂದನ್ ಅವರನ್ನು ಭೇಟಿ ಮಾಡಿದ್ದು, ಹೃದಯ, ಸ್ಟ್ರೋಕ್ ಮತ್ತು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ತಂತ್ರಜ್ಞಾನಗಳ ಕುರಿತು ಚರ್ಚಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸ್ಟೆಂಟ್ ಅಳವಡಿಕೆ, ಹಾರ್ಟ್ ಬ್ಲಾಕೇಜ್, ರಕ್ತ ಹೆಪ್ಪುಗಟ್ಟುವಿಕೆ (ಬ್ಲಡ್ ಕ್ಲಾಟ್) ಮತ್ತು ಸರ್ವಿಕಲ್ ಕ್ಯಾನ್ಸರ್ ತಡೆಗಟ್ಟುವ ಹೊಸ ತಂತ್ರಜ್ಞಾನಗಳ ಸಂಶೋಧನೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ. ಚಿಕಿತ್ಸೆ ಮತ್ತು ರೋಗನಿರ್ಣಯದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯ ಕುರಿತೂ ಚರ್ಚೆಗಳು ನಡೆದಿವೆ.
ಕರ್ನಾಟಕದ ಐಟಿಬಿಟಿ ನೀತಿಗೆ ಮೆಚ್ಚುಗೆ
ಈ ಸಂದರ್ಭದಲ್ಲಿ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯವು ಕರ್ನಾಟಕದ ಐಟಿಬಿಟಿ ನೀತಿಯನ್ನು ಪ್ರಶಂಸಿಸಿದೆ. ಬೆಂಗಳೂರಿನ ವಿಜ್ಞಾನ ಮತ್ತು ವೈದ್ಯಕೀಯ ವಿಜ್ಞಾನ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ಅಮೆರಿಕ, ಸಿಂಗಾಪುರ, ಜಪಾನ್, ಯೂರೋಪ್ ಮತ್ತು ಇಂಗ್ಲೆಂಡ್‌ನಂತಹ ದೇಶಗಳ ವಿದ್ಯಾರ್ಥಿಗಳಿಗೆ ಸವಾಲು ಒಡ್ಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಗ್ರಾಮೀಣ ಭಾಗದ ಉನ್ನತಿಗೆ ತಂತ್ರಜ್ಞಾನ
ಗ್ರಾಮೀಣ ರೈತರಿಗೆ ಅನುಕೂಲವಾಗುವಂತೆ ಸುಧಾರಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಯೂ ಮಾತುಕತೆಗಳು ನಡೆದಿವೆ. ಕಡಿಮೆ ದರದಲ್ಲಿ ಗ್ರಾಮೀಣ ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಎಲೆಕ್ಟ್ರಿಕಲ್ ಸ್ಕೂಟರ್, ಆಟೋ ಮತ್ತು ಸೌರಶಕ್ತಿ ಚಾಲಿತ ವಾಹನಗಳನ್ನು ತಲುಪಿಸುವ ನಿಟ್ಟಿನಲ್ಲಿಯೂ ಸಂಶೋಧನೆಗಳು ನಡೆಯುತ್ತಿವೆ. ಜಲ ಮತ್ತು ಇಂಧನ ಮರುಬಳಕೆ, ವಿಜ್ಞಾನ ಅಭಿವೃದ್ಧಿ ಮತ್ತು ದತ್ತಾಂಶ ವಿಜ್ಞಾನದ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ. ಈ ಎಲ್ಲಾ ಸಂಶೋಧನೆಗಳಿಗೆ ಕರ್ನಾಟಕ ಸರ್ಕಾರವು ಆಸಕ್ತಿ ವಹಿಸಿದರೆ ಹೆಚ್ಚಿನ ಸಹಭಾಗಿತ್ವ ಸಾಧ್ಯವಾಗಲಿದೆ ಎಂದು ಪ್ರೊಫೆಸರ್‌ಗಳು ತಿಳಿಸಿದ್ದಾರೆ.
ಹೊಸ ಒಪ್ಪಂದಕ್ಕೆ ಸಿದ್ಧತೆ
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಈ ವಿಶ್ವವಿದ್ಯಾಲಯವು ಭಾರತ ಮತ್ತು ಬೆಂಗಳೂರಿನೊಂದಿಗೆ ಹೊಸ ಒಪ್ಪಂದ ಮತ್ತು ಮಾತುಕತೆಗೆ ಸಿದ್ಧವಿದೆ ಎಂದು ಪ್ರೊಫೆಸರ್‌ಗಳು ತಿಳಿಸಿದ್ದಾರೆ. ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದೊಂದಿಗೆ ವೈದ್ಯಕೀಯ ಮತ್ತು ಐಟಿಬಿಟಿ ಕ್ಷೇತ್ರಗಳಲ್ಲಿ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲು ಆಸಕ್ತಿ ಹೊಂದಿದೆ. ಈ ಭೇಟಿಯು ಕರ್ನಾಟಕದ ಅಭಿವೃದ್ಧಿಗೆ ಹೊಸ ದಾರಿಯನ್ನು ತೆರೆಯುವ ಸಾಧ್ಯತೆ ಇದೆ. ಈ ನಿಯೋಗದಲ್ಲಿ ಯು.ಟಿ. ಖಾದರ್ ಮತ್ತು ಮಂಜುನಾಥ್ ಭಂಡಾರಿ ಅವರಲ್ಲದೆ, ಶಾಸಕರಾದ ಬಿ.ಆರ್. ಪಾಟೀಲ್, ಸುರೇಶ ಬಾಬು, ಭೀಮಣ್ಣ ನಾಯಕ್, ಶ್ರೀನಿವಾಸ ಮಾನೆ, ಪಿ.ಎಂ. ಅಶೋಕ್, ಅಶೋಕ್ ರೈ, ಗುರುರಾಜ್ ಗಂಟಿಹೊಳಿ, ಸುರೇಶ್ ಶೆಟ್ಟಿ ಮತ್ತು ದಿನೇಶ್ ಗೂಳಿಗೌಡ ಅವರು ಉಪಸ್ಥಿತರಿದ್ದರು.
ಅಧ್ಯಯನಕ್ಕೆ ವಿಶೇಷ ತಂಡ ರಚಿಸಿ: ಮಂಜುನಾಥ್ ಭಂಡಾರಿ
ಸ್ಟಾನ್‌ಫೋರ್ಡ್ ಯುನಿವರ್ಸಿಟಿಯೋ ಸುಮಾರು 8000 ಎಕರೆ ಪ್ರದೇಶದಲ್ಲಿ ಇದೆ. ಇಲ್ಲಿ 9000 ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ಇದೊಂದು ಅತ್ಯಾಧುನಿಕ ಹಾಗೂ ಮುಂದುವರಿದ ಮಟ್ಟದಲ್ಲಿರುವ ಯೂನಿವರ್ಸಿಟಿಯಾಗಿದ್ದು, ಇಲ್ಲಿಗೆ ಅಧ್ಯಯನಕ್ಕಾಗಿಯೇ ವಿಶೇಷ ತಂಡವನ್ನು ರಚಿಸಿ ಕಳುಹಿಸಿಕೊಡಬೇಕಿದೆ. ಆ ಮೂಲಕ ಇಲ್ಲಿನ ಆಲೋಚನೆ, ಕಲಿಕಾ ರೀತಿ, ಗ್ರಾಮೀಣ ಜನರಿಗೆ ಆರೋಗ್ಯ, ತಂತ್ರಜ್ಞಾನಗಳ ಬಗ್ಗೆ ಕಲಿಕೆಗೆ ಅನುಕೂಲ ಮಾಡಿಕೊಡಲು ಇದು ಸಹಾಯಕವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಮಾಡುತ್ತಿರುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ಎಲೆಕ್ಟ್ರಿಕ್, ಸೋಲಾರ್ ವಾಹನಗಳ ಬಳಕೆಗೆ ಒತ್ತು ಸಿಗಲಿ: ದಿನೇಶ್ ಗೂಳಿಗೌಡ
ಕರ್ನಾಟಕದಲ್ಲಿ 7 ಕೋಟಿ ಜನಸಂಖ್ಯೆ ಇದ್ದು, ನಮ್ಮ ರಾಜಧಾನಿ ಬೆಂಗಳೂರೊಂದರಲ್ಲೇ 1 ಕೋಟಿ 47 ಲಕ್ಷ ಮಂದಿ ಇದ್ದಾರೆ. ರಾಜ್ಯದಲ್ಲಿ ದಿನಕ್ಕೆ 6000 ವಾಹನಗಳು ನೋಂದಣಿಯಾಗಿ ರಸ್ತೆಗಳಿಯುತ್ತಿದ್ದರೆ, ಬೆಂಗಳೂರಲ್ಲಿ ದಿನಕ್ಕೆ 2500 ವಾಹನಗಳು ನೋಂದಣಿಯಾಗಿ ರಸ್ತೆಗಿಳಿಯುತ್ತಿವೆ. ಈ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಭಾಗದ ಮಹಿಳೆಯರು, ರೈತರಿಗೆ ಕಡಿಮೆ ವೆಚ್ಚದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ನೀಡುವ ನಿಟ್ಟಿನಲ್ಲಿ ಸಂಶೋಧನೆಗಳು ಸಾಗಿವೆ. ಹೀಗಾಗಿ ನಮ್ಮ ಕರ್ನಾಟಕದಲ್ಲಿಯೂ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕಿದ್ದು, ಎಲೆಕ್ಟ್ರಿಕ್ ಹಾಗೂ ಸೋಲಾರ್ ವಾಹನಗಳನ್ನು ಬಳಸಲು ಅನುವಾಗುವ ರೀತಿಯಲ್ಲಿ ನಮ್ಮ ರಾಜ್ಯ ಸರ್ಕಾರವು ಹೊಸ ತಂತ್ರಜ್ಞಾನದೊಂದಿಗೆ ನೀತಿ- ನಿಯಮಗಳನ್ನು ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಯಪ್ರವೃತ್ತರಾಗಬೇಕೆಂದು ಈ ಮೂಲಕ ಮನವಿ ಮಾಡುತ್ತೇನೆ ಎಂದು ಎಂಎಲ್ಸಿ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.