ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ದೇಶದಲ್ಲಿಯೇ ಮೊದಲು ಜಾರಿಗೆ ತಂದ ರಾಜ್ಯ ನಮ್ಮದು. ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ. ೨ ಲಕ್ಷ ಹಾಗೂ ಜೀವ ವಿಮಾ ರೂ. ೨ ಲಕ್ಷ ಸೇರಿ ಒಟ್ಟು ರೂ. ೪ ಲಕ್ಷಗಳು, ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ. ೨ ಲಕ್ಷಗಳವರೆಗೆ ಜೊತೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ರೂ. ೧ ಲಕ್ಷಗಳವರೆಗೆ ಹಾಗೂ ಜೀವ ವಿಮಾ ರೂ. ೨ ಲಕ್ಷಗಳು ನೀಡಲಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಇಂದು ನಗರದ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಸಂಘಟಿತ ಕಾರ್ಮಿಕರಿಗೆ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಪ್ರತಿಯೊಬ್ಬ ಅಸಂಘಟಿತ ಕಾರ್ಮಿಕರು ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸುವುದು ಸರ್ಕಾರದ ಉದ್ದೇಶ. ಜೊತೆಗೆ ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜನಪದ ಕಲೆ, ಹೀಗೆ ವಿವಿಧ ರೀತಿಯಲ್ಲಿ ತೊಡಗಿಸಿಕೊಂಡಿರುವ ಅಸಂಘಟಿತ ಕಾರ್ಮಿಕರಿಗೂ ಸೌಲಭ್ಯ ಜಾರಿಗೊಳಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಆಟೋ ರಿಕ್ಷಾ ಚಾಲಕರು, ಪೇಯಿಂಟಿಂಗ್ ಮಾಡುವವರು ಸೇರಿದಂತೆ ಹಲವರಿಗೆ ಕಾರ್ಮಿಕ ಕಾಯ್ದೆ ಜಾರಿಗೊಳಿಸಲಾಗಿದ್ದು, ಅಸಂಘಟಿತ ಕಾರ್ಮಿಕರು ಅಪಘಾತದಲ್ಲಿ ಮೃತರಾದಲ್ಲಿ ೫ ಲಕ್ಷ ರೂ.ವರೆಗೂ ಪರಿಹಾರ ವಿತರಿಸಲಾಗುತ್ತದೆ ಎಂದ ಅವರು, ಸ್ವಿಗ್ಗಿ, ಜೊಮೆಟೋಗಳಂತಹ ಸಂಸ್ಥೆಯಲ್ಲಿ ಆಹಾರ ಸರಬರಾಜು ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಪ್ಲಿಪ್‌ಕಾರ್ಟ್, ಪೋರ್ಟಲ್, ಫಾರ್ಮಸಿ, ಬ್ಲಿಂಕಿಟ್, ಬಿಗ್ ಬಾಸ್ಕೆಟ್, ಡೊಮಿನಾಜ್ ಮತ್ತಿತರ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿಸಿಕೊಂಡವರೆಲ್ಲರೂ ಅಸಂಘಟಿತ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು.
ದೇಶದಲ್ಲಿ ತಲಾ ಆದಾಯದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಜಿಎಸ್‌ಟಿ ಸಂಗ್ರಹದಲ್ಲೂ ಮುಂಚೂಣಿಯಲ್ಲಿದ್ದೇವೆ. ಇದಕ್ಕೆ ಗ್ಯಾರಂಟಿ ಯೋಜನೆಗಳ ಯಶಸ್ಸು ಕಾರಣ. ಆಶಾ ದೀಪ ಕಾರ್ಯಕ್ರಮದಲ್ಲಿ ಎಸ್‌ಸಿ, ಎಸ್‌ಟಿ ವರ್ಗದವರಿಗೆ ಕೆಲಸ ನೀಡುವವರಿಗೆ ರೂ. ೭೫೦೦ ರವರೆಗೆ ನೆರವು ನೀಡಲಾಗುತ್ತಿದೆ. ಹೊರಗುತ್ತಿಗೆ ನೌಕರರು ಸೊಸೈಟಿ ಮೂಲಕ ಕಾರ್ಯ ನಿರ್ವಹಿಸಲಿದ್ದು, ಸಂಬಳ ಸಮಸ್ಯೆ ತಪ್ಪಲಿದೆ. ಮುಂದಿನ ದಿನಗಳಲ್ಲಿ ಮನೆ ಕೆಲಸ ಕಾರ್ಮಿಕರಿಗೆ ಕನಿಷ್ಠ ವೇತನ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಕರ್ನಾಟಕ ರಾಜ್ಯ ಸರ್ಕಾರವು ಅಸಂಘಟಿತ ವರ್ಗಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ “ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ”ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಾರಂಭಿಕವಾಗಿ ೨೬ ವರ್ಗಗಳ ಅಸಂಘಟತ ಕಾರ್ಮಿಕರನ್ನು ನೋಂದಾಯಿಸಲಾಗುತ್ತಿತ್ತು. ಪ್ರಸ್ತುತ ಹೊಸದಾಗಿ ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ ಮತ್ತು ೩ಬಿಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ ೩೮ ವರ್ಗಗಳು ಹಾಗೂ ಹಿಂದುಳಿದ ವರ್ಗಗಳ ಅಲೆಮಾರಿ ಹಾಗೂ ಅರೆಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ ೨೭ ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟಾರೆ ೯೧ ವರ್ಗಗಳ ಕಾರ್ಮಿಕರನ್ನು ಉಚಿತವಾಗಿ ನೋಂದಾಯಿಸಿ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಸುಮಾರು ೩೫ ಲಕ್ಷ ಕಾರ್ಮಿಕರು ಇರುವುದಾಗಿ ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ, ೧೦೯ ಅಸಂಘಟಿತ ಕಾರ್ಮಿಕರಿಗೆ ಅಪಘಾತ, ಸಹಜ ಮರಣವಾದವರಿಗೆ ಪರಿಹಾರ ಈ ರೀತಿಯ ಯೋಜನೆಗಳನ್ನು ನೀಡುವ ಮುಖಾಂತರ ಅವರ ಕುಟುಂಬದ ಭದ್ರತೆಯನ್ನು ಕಾಪಾಡಲಾಗಿದೆ. ೨೬ ಅಸಂಘಟಿತ ಕಾರ್ಮಿಕರ ವರ್ಗಗಳನ್ನು ಗುರುತಿಸಲಾಗಿದೆ. ಕಾರ್ಮಿಕ ಇಲಾಖೆ ವತಿಯಿಂದ ಈ ಅಸಂಘಟಿತ ಕಾರ್ಮಿಕರಿಗೆ ಖಾಸಗಿ ಅಥವಾ ಸ್ವಂತ ವಾಹನ ಮಾಲೀಕರು ಸೇರಿದಂತೆ ಎಲ್ಲಾ ರೀತಿಯ ಕೆಲಸಗಾರರಿಗೆ ಆಕಸ್ಮಿಕ ಮರಣ ಸಂಭಾವ್ಯ ಪ್ರಕರಣಗಳಲ್ಲಿ ರೂ. ೫ ಲಕ್ಷ ಪರಿಹಾರವನ್ನು ನೀಡಲಾಗುತ್ತದೆ ಎಂದು ಹೇಳಿದರು.
ನಮ್ಮ ಜಿಲ್ಲೆಯಲ್ಲಿ ಈಗಾಗಲೇ ೭೮,೧೩೨ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ಕಾರ್ಮಿಕ ಮಂಡಳಿಯಿಂದ ೩೧,೪೭೨ ಜನರಿಗೆ ಒಟ್ಟು ರೂ. ೫೬.೯೮ ಕೋಟಿಯನ್ನು ಕಾರ್ಮಿಕ ಇಲಾಖೆಯಿಂದ ನೇರವಾಗಿ ಕಾರ್ಮಿಕರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಜೊತೆಗೆ ೨೧,೨೬೨ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ.೧೯.೯೫ ಕೋಟಿಯನ್ನು ನೀಡಲಾಗಿದೆ. ವೈದ್ಯಕೀಯ ಸೇವೆಗಾಗಿ ೩೮೧ ಫಲಾಭವಿಗಳಿಗೆ ರೂ.೧.೪೯ ಕೋಟಿಯ ನೆರವು ನೀಡಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್ ಮಾತನಾಡಿದರು. ಕಾರ್ಮಿಕ ಇಲಾಖೆಯ ಆಯುಕ್ತ ಹೆಚ್.ಎನ್.ಗೋಪಾಲಕೃಷ್ಣ ಸಂವಿಧಾನ ಪೀಠಿಕೆ ಬೋಧಿಸಿದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಭದ್ರಾ ಕಾಡಾ ಅಧ್ಯಕ್ಷರಾದ ಡಾ.ಕೆ.ಪಿ.ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷರಾದ ಬಿ.ಹೆಚ್.ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್, ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಂಟಿ ಕಾರ್ಮಿಕ ಆಯುಕ್ತ ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.