ಬೆಂಗಳೂರು: ನವೀಕರಿಸಬಹುದಾದ ಇಂಧನವೂ ಸೇರಿದಂತೆ ಇಂಧನ ಉತ್ಪಾದನೆ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕವು ದೇಶದ ಇಂಧನ ವಲಯದ ಭವಿಷ್ಯ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಗುರುವಾರ ನಡೆದ ನವೀಕರಿಸಬಹುದಾದದ ಇಂಧನ ಹಾಗೂ ಹಸಿರು ಆರ್ಥಿಕತೆ ಜಾಗತಿಕ ಮಾರುಕಟ್ಟೆಯ ಅವಕಾಶಗಳ ಕುರಿತ ಭಾರತ ಮತ್ತು ಆಸ್ಟ್ರೇಲಿಯಾ ದ್ವೀಪಕ್ಷೀಯ ಸಭೆಯಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು.
“ರಾಜ್ಯದಲ್ಲಿ ಹೂಡಿಕೆದಾರರ ಸ್ನೇಹಿ ಸರ್ಕಾರವಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಗೆ ವಿಫುಲ ಅವಕಾಶಗಳಿದ್ದು, ಆಸ್ಟ್ರೇಲಿಯಾದ ಸಂಸ್ಥೆಗಳು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಬೇಕು. ಅದಕ್ಕೆ ಅಗತ್ಯ ಸಹಕಾರ ನೀಡಲಾಗುವುದು,”ಎಂದರು.
“ಉದ್ಯಮ ಸ್ನೇಹಿ ರಾಜ್ಯ ಎನಿಸಿಕೊಂಡಿರುವ ಕರ್ನಾಟಕದಲ್ಲಿ ಅತ್ಯುತ್ತಮ ಕೈಗಾರಿಕಾ ನೀತಿ ಇದ್ದು, ಅಗತ್ಯ ಪ್ರೋತ್ಸಾಹಗಳನ್ನು ಒದಗಿಸುತ್ತಿದೆ. ಈ ಹಿಂದೆ ನಾನು ಕೈಗಾರಿಕಾ ಸಚಿವನಾಗಿದ್ದಾಗಲೂ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡಿದ್ದೆ. ಬಂಡವಾಳ ಹೂಡಿಕೆಗೂ ಇದು ಪ್ರಶಸ್ತ ರಾಜ್ಯ. ಇಲ್ಲಿನ ಜನರು ಸ್ನೇಹಪರರರು. ಕೇರಳ ದೇವರ ನಾಡು ಎನಿಸಿಕೊಂಡರೆ ಕರ್ನಾಟಕದವರನ್ನು ‘ದೇವರ ಜನ’ (ಗಾಡ್ಸ್ ಓನ್ ಪೀಪಲ್) ಎನ್ನುತ್ತೇವೆ,”ಎಂದರು.
“ಶುದ್ಧ ಇಂಧನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ಸ್ಮಾರ್ಟ್ ಎನರ್ಜಿ ಕೌನ್ಸಿಲ್ ಹಾಗೂ ನವೀಕರಿಸಬಹುದಾದ ಇಂಧನ ವಲಯದ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸಿ, ಅಭಿವೃದ್ಧಿಪಡಿಸಲು ಆಸ್ಟ್ರೇಲಿಯಾದ ಸೌತ್ ವೇಲ್ಸ್ ವಿಶ್ವವಿದ್ಯಾಲಯದೊಂದಿಗೆ ಇಂಧನ ಇಲಾಖೆ ಇತ್ತೀಚೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದವು ಶುದ್ಧ ಇಂಧನ, ನವೀಕರಿಸಬಹುದಾದ ಇಂಧನ, ಗ್ರೀನ್ ಹೈಡ್ರೋಜನ್, ಬ್ಯಾಟರಿ ಪವರ್ ಸ್ಟೋರೇಜ್ ವ್ಯವಸ್ಥೆಗಳು ಮತ್ತು ಸಂಬಂಧಿತ ವಲಯಗಳಲ್ಲಿ ಸಹಕಾರ ಹೆಚ್ಚಿಸುವ ಗುರಿ ಹೊಂದಿದೆ,” ಎಂದು ಅವರು ತಿಳಿಸಿದರು.
“ನವೀಕರಿಸಬಹುದಾದ ಇಂಧನ ವಲಯದ ಸಾಮರ್ಥ್ಯ ವರ್ಧನೆ ಮತ್ತು ಹೊಸ ತಂತ್ರಜ್ಞಾನಗಳನ್ನು ಆವಿಷ್ಕರಿಸುವ ಸ್ಟಾರ್ಟ್ಅಪ್‌ಗಳಿಗೆ ರಾಜ್ಯದಲ್ಲಿ ಪೂರಕ ಪರಿಸರವಿದೆ. ಸಂಶೋಧನೆ ಮತ್ತು ಆವಿಷ್ಕಾರ ವಲಯಕ್ಕೆ ಸಂಬಂಧಿಸಿದ ಪರಿಣಿತಿಯನ್ನು ಆಸ್ಟ್ರೇಲಿಯಾ ನಮ್ಮ ಜತೆ ಹಂಚಿಕೊಳ್ಳುವುದರಿಂದ ಜಾಗತಿಕ ಮಟ್ಟದ ಪರಿಸರ ವ್ಯವಸ್ಥೆಯನ್ನು ರೂಪಿಸುವ ನಿಟ್ಟಿನಲ್ಲಿ ಹಾಕಿಕೊಂಡಿರುವ ನಮ್ಮ ಗುರಿಗೆ ಒಪ್ಪಂದಗಳು ನೆರವಾಗಲಿವೆ. ಉದ್ಯಮಗಳು, ಸರ್ಕಾರ ಮತ್ತು ನಾಗರಿಕರಿಗೆ ಇದು ಲಾಭದಾಯಕವಾಗಲಿದೆ” ಎಂದು ಅವರು ಹೇಳಿದರು.
“ಶುದ್ಧ ಇಂಧನ, ಗ್ರೀನ್ ಹೈಡ್ರೋಜನ್, ಬ್ಯಾಟರಿ ಪವರ್ ಸ್ಟೋರೇಜ್ ಮತ್ತು ಸಂಬಂಧಿತ ವಲಯಗಳಲ್ಲಿ ಪರಸ್ಪರ ಸಹಕಾರ ಇದೆ. ನೂತನ ತಂತ್ರಜ್ಞಾನಗಳನ್ನು ಸದುಪಯೋಗಪಡಿಸಿಕೊಳ್ಳುವ ಜತೆಗೆ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲಾಗುವುದು,” ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಬಂಡವಾಳ ಹೂಡಿ
ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, “ನವೀಕರಿಸಬಹುದಾದ ಇಂಧನದ ಅತ್ಯಧಿಕ ಸ್ಥಾಪಿತ ಸಾಮರ್ಥ್ಯ ಹೊಂದಿರುವ ದೇಶದ ಮೊದಲ 5 ರಾಜ್ಯಗಳಲ್ಲಿ ಕರ್ನಾಟಕವು ಒಂದಾಗಿದೆ. ಸೌರ ಹಾಗೂ ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ರಾಜ್ಯವು ದೇಶದಲ್ಲೇ 3ನೇ ಸ್ಥಾನದಲ್ಲಿದ್ದೇವೆ. ನವೀಕರಿಸಬಹುದಾದದ ಇಂಧನ ವಲಯದಲ್ಲಿ ಹೂಡಿಕೆ ಅವಕಾಶಗಳಿದ್ದು, ಆಸ್ಟ್ರೇಲಿಯಾದ ಸಂಸ್ಥೆಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಮುಂದೆ ಬರಬೇಕು,” ಎಂದು ಮನವಿ ಮಾಡಿದರು.
ಸಭೆಯಲ್ಲಿ ಕ್ರೆಡಲ್ ಅಧ್ಯಕ್ಷರಾದ ಟಿ.ಡಿ. ರಾಜೇಗೌಡ, ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹಾಗೂ ಆಸ್ಟ್ರೇಲಿಯಾ ಇಂಡಿಯಾ ಬಿಸಿನೆಸ್ ಕೌನ್ಸಿಲ್‌ನ ಅಧ್ಯಕ್ಷ ಇರ್ಫಾನ್ ಮಲ್ಲಿಕ್, ಆಸ್ಟ್ರೇಲಿಯಾದ ವಾಣಿಜ್ಯ ಮತ್ತು ಹೂಡಿಕೆ ಇಲಾಖೆಯ ಆಯುಕ್ತೆ ಡೆನ್ನಿಸ್ ಇಟಾನ್, ಆಸ್ಟ್ರೇಲಿಯಾದ ವಾಣಿಜ್ಯ ಮತ್ತು ಹೂಡಿಕೆ (ಭಾರತದಲ್ಲಿನ ಹೂಡಿಕೆ) ಮುಖ್ಯಸ್ಥೆ ಮಾಲಿನಿ ದತ್ ಉಪಸ್ಥಿತರಿದ್ದರು.