ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ರಫ್ತಿನಲ್ಲಿ ನಂ.೧ ಸ್ಥಾನದಲ್ಲಿದೆ ಎಂದು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಳಿದರು.
ಶುಕ್ರವಾರ ಮಂಡಿಸಿದ ದಾಖಲೆಯ 16ನೇ ಬಜೆಟ್ ನಲ್ಲಿ ಕರ್ನಾಟಕದ ಸಾಧನೆಯನ್ನು ವಿವರಿಸಿದ ಅವರು, 4.4 ಬಿಲಿಯನ್ ಯುಎಸ್ಡಿ ಹೂಡಿಕೆ ಆಕರ್ಷಿಸಿದ ರಾಜ್ಯ ಸರ್ಕಾರ ದೇಶದಲ್ಲೇ ಬಂಡವಾಳ ಹೂಡಿಕೆ ಸೆಳೆಯುವಲ್ಲಿ ಮೂರನೇ ಸ್ಥಾನದಲ್ಲಿದೆ ಎಂದರು.
ಇನ್ವೆಸ್ಟ್ ಕರ್ನಾಟಕಕ್ಕೆ 10 ಲಕ್ಷದ 27 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸಲಾಗಿದ್ದು, ಬೆಂಗಳೂರು, ಕೋಲಾರ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬೃಹತ್ ಉದ್ಯಮಗಳು ಸ್ಥಾಪನೆ ಆಗಲಿದ್ದು, 6 ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ಅಭಿವೃದ್ಧಿಯಲ್ಲೂ ಮೂರನೇ ಸ್ಥಾನದಲ್ಲಿದ್ದು, ದೇಶದ ಒಟ್ಟಾರೆ ಜಿಡಿಪಿಗಿಂತ ಕರ್ನಾಟಕದ ಜಿಡಿಪಿ ಉತ್ತಮವಾಗಿದೆ. ಕರ್ನಾಟಕದ ಜಿಡಿಪಿ ಶೇ.೧೧.೧೭ಕ್ಕೆ ಏರಿಕೆಯಾಗಿ ಹೊಸ ಮೈಲುಗಲ್ಲು ಸ್ಥಾಪಿಸಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ರಫ್ತಿನಲ್ಲಿ ದೇಶದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದು, 88,853 ಮಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳು ರಫ್ತು ಆಗುತ್ತಿವೆ ಎಂದು ಬಜೆಟ್ ಮಂಡನೆಯ ವೇಳೆ ಸಿಎಂ ವಿವರಿಸಿದರು.