ಸರ್ಕಾರದ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು, ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳು, ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಸಾಫ್ಟ್ ವೇರ್ ಟೆಕ್ನಾಲಜೀ ಪಾರ್ಕ್ಸ್ ಆಫ್ ಇಂಡಿಯಾ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ‘ಬೆಂಗಳೂರು ಟೆಕ್ ಸಮ್ಮಿಟ್’ 28 ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದರು.
ಈ ಶೃಂಗಸಭೆಯಲ್ಲಿ, ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030, ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030, ಮತ್ತು ಸ್ಟಾರ್ಟ್ಅಪ್ ನೀತಿ 2025-2030 ಗಳಂತಹ ಮೂರು ಪ್ರಮುಖ ನೀತಿಗಳನ್ನು ರಚಿಸುವ ಮೂಲಕ ಐತಿಹಾಸಿಕ ಹೆಜ್ಜೆಯನ್ನು ಇಡಲಾಗಿದೆ. ದತ್ತಾಂಶ ಚಾಲಿತ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾದ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿಯಿಂದ, ರಾಜ್ಯವನ್ನು ನಾವೀನ್ಯತೆ ಮತ್ತು ಡೀಪ್ ಟೆಕ್ ಗಳಿಗೆ ಜಾಗತಿಕ ತಾಣವಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
2034 ರ ವೇಳೆಗೆ ಕರ್ನಾಟಕವನ್ನು ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಪರಿವರ್ತಿಸುವ ನಮ್ಮ ಗುರಿಗೆ ಬಾಹ್ಯಾಕಾಶ ತಂತ್ರಜ್ಞಾ ನೀತಿ 2025-30 ಸಹಕಾರಿಯಾಗಲಿದೆ. ಹೊಸ ಸ್ಟಾರ್ಟ್ಅಪ್ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ ಬಂಡವಾಳ ನೆರವು, ಮಾರುಕಟ್ಟೆ ಅವಕಾಶ, ಮೂಲಸೌಲಭ್ಯ, ಕೌಶಲ್ಯಾಭಿವೃದ್ಧಿಯಂತಹ ಕ್ರಮಗಳ ಮೂಲಕ 25,000 ಸ್ಟಾರ್ಟ್ಅಪ್ಗಳ ಸ್ಥಾಪನೆಗೆ ನೆರವಾಗುವ ಗುರಿಯನ್ನು ಸರ್ಕಾರ ಹೊಂದಿರುವುದಾಗಿ ತಿಳಿಸಿದರು.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಒಂದು ಸಮಾವೇಶಕ್ಕಿಂತಲೂ ಹೆಚ್ಚಾಗಿ ಹೊಸ ಹೊಸ ವಿಚಾರಗಳು, ಸಂವಾದಗಳು, ಬಂಡವಾಳ ಹೂಡಿಕೆ ಆವಿಷ್ಕಾರ ಮತ್ತು ಪರಿವರ್ತನೆಯ ಮನ್ವಂತರಕ್ಕೆ ವೇದಿಕೆಯಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಹಲವು ಉತ್ತಮ ಅವಕಾಶಗಳಿಗೆ ಜಾಗತಿಕ ವೇದಿಕೆಯಾಗಿ ಹೊಸ ಮುನ್ನುಡಿ ಬರೆಯಲಿ ಎಂದು ಹಾರೈಸುತ್ತೇನೆ ಎಂದರು.
ಈ ವರ್ಷದ ಧ್ಯೇಯವಾಕ್ಯ “ಭವಿಷ್ಯೀಕರಣಗೊಳ್ಳಿ” ಅಜ್ಞಾತವನ್ನು ರೂಪಿಸುತ್ತಾ, ಊಹಿಸಿಲಾಗದ್ದನ್ನು ಅಳೆಯುತ್ತಾ , ಜಗತ್ತನ್ನು ಮುಂದೆ ಕೊಂಡೊಯ್ಯುವುದು ಎಂಬುದಾಗಿದೆ. ಈ ಆಶಯ ನಮ್ಮ ಸಾಮೂಹಿಕ ಧ್ಯೇಯದ ಸಂಕಲ್ಪವನ್ನು ಎತ್ತಿ ಹಿಡಿಯುತ್ತದೆ ಎಂದು ತಿಳಿಸಿದರು.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ- 2025, ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ 600ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು, 1200ಕ್ಕೂ ಹೆಚ್ಚು ಪ್ರದರ್ಶಕರು, 60ಕ್ಕೂ ಹೆಚ್ಚು ದೇಶದ ನಿಯೋಗಗಳು ಮತ್ತು ಸಾವಿರಾರು ಪರಿಣತರು ಮುಂದಿನ ದಶಕಗಳಲ್ಲಿ ತಂತ್ರಜ್ಞಾನದ ರೂಪುರೇಷೆಗಳನ್ನು , ಹೊಸ ಸಾಧ್ಯತೆಗಳನ್ನು ಇಲ್ಲಿ ಸಂವಾದಿಸಿ, ಕೇವಲ ಕರ್ನಾಟಕಕ್ಕಾಗಲಿ ಅಥವಾ ಭಾರತಕ್ಕೆ ಆಗಲಿ ಮಾತ್ರವಲ್ಲ, ಇಡೀ ಜಗತ್ತಿಗೇ ತೆರೆದಿಡುತ್ತಾರೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆ- 2025 ಪರಿವರ್ತನೆಯ ಹರಿಕಾರ ಎಂಬುದನ್ನು ಈಗಾಗಲೇ ಹೇಳಿದ್ದೇನೆ. ಇದು ಶೈಕ್ಷಣಿಕ ವಲಯವನ್ನು ಉದ್ಯಮಕ್ಕೆ ಬೆಸೆಯುತ್ತದೆ. ನವೋದ್ಯಮಗಳನ್ನು ಹೂಡಿಕೆದಾರರಿಗೆ ಪರಿಚಯಿಸುತ್ತದೆ. ಅನ್ಯ ದೇಶಗಳ ಪರಿಣಿತರನ್ನು ಸಂಶೋಧಕರನ್ನು, ನೀತಿ ನಿರೂಪಕರನ್ನು ಪರಸ್ಪರ ಬೆಸೆಯುವುದಲ್ಲದೇ , ಜಾಗತಿಕ ಮಾರುಕಟ್ಟೆಗಳನ್ನು ಸಂಪರ್ಕಿಸಲು ಬೃಹತ್ ವೇದಿಕೆಯಾಗಿದೆ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದರು
ಸುಸ್ಥಿರ ಅಭಿವೃದ್ಧಿ ನಮ್ಮ ಧ್ಯೇಯ, ಭವಿಷ್ಯೀಕರಣಗೊಳ್ಳಿ ಎನ್ನುವ ಆಶಯ, ನುಡಿಯಂತೆ ತಂತ್ರಜ್ಞಾನವು ಸಾಮಾಜಿಕ ಒಳಿತನ್ನು, ಆರ್ಥಿಕ ನ್ಯಾಯವನ್ನು, ಸುಸ್ಥಿರ ಅಭಿವೃದ್ಧಿಯನ್ನು ಮತ್ತು ಸಮಾಜದ ಎಲ್ಲರಿಗೂ ಸಮೃದ್ಧಿಯನ್ನು ಒದಗಿಸಬೇಕು ಎಂಬ ನಮ್ಮ ನಂಬಿಕೆಯನ್ನು ನಾವು ಪುನರುಚ್ಚರಿಸುತ್ತೇವೆ. ಕೃತಕ ಬುದ್ಧಿಮತ್ತೆ, ಕ್ವಾಂಟಮ್, ಬಯೋಟೆಕ್, ಬಾಹ್ಯಾಕಾಶ ಮತ್ತು ಹಸಿರು ತಂತ್ರಜ್ಞಾನಗಳಿಂದ ಕೂಡಿರುವ ಡಿಜಿಟಲ್ ಯುಗದಲ್ಲಿ ನಾವು ನಿಂತಿದ್ದೇವೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2025ದಿಟ್ಟ, ಮಾನವೀಯ ಮತ್ತು ಪರಿವರ್ತನಾತ್ಮಕ ಭವಿಷ್ಯವನ್ನು ಸಹ-ಸೃಷ್ಟಿಸಲು ಇಡೀ ಜಗತ್ತಿಗೆ ಕರ್ನಾಟಕದ ಆಹ್ವಾನವಾಗಿದೆ ಎಂದು ಹೇಳಿದರು.
ಕರ್ನಾಟಕವು ಜ್ಞಾನಕಾಶಿ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ. 85 ವಿಶ್ವವಿದ್ಯಾಲಯಗಳು, 243 ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸುಮಾರು 1,800 ಐಟಿಐಗಳಿಗೆ ಕರ್ನಾಟಕ ನೆಲೆಯಾಗಿದೆ. ರಾಜ್ಯದ ನಿರುದ್ಯೋಗ ಪ್ರಮಾಣ
4.3% ರಷ್ಟು ಮಾತ್ರ ಇದ್ದು, ಇದು ರಾಜ್ಯದ ಸಮರ್ಥ ಉತ್ಪಾದಕತೆ ಮತ್ತು ಉದ್ಯೋಗಾವಕಾಶಗಳನ್ನು ಎತ್ತಿ ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
IISc, IIM-B, IIIT-B, NCBS, JNCASR, NIMHANS, DRDO ಪ್ರಯೋಗಾಲಯಗಳು, ISRO ಕೇಂದ್ರಗಳು ಮತ್ತು ಹಲವಾರು ವಿಶ್ವ ದರ್ಜೆಯ ಖಾಸಗಿ ವಿಶ್ವವಿದ್ಯಾಲಯಗಳಂತಹ ಪ್ರಮುಖ ಸಂಸ್ಥೆಗಳ ತವರಾಗಿ, ಸಾಟಿಯಿಲ್ಲದ ಬೌದ್ಧಿಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಪೋಷಿಸುತ್ತದೆ ಎಂಬುದು ಅತ್ಯಂತ ಮಹತ್ವದ ವಿಚಾರ. ಉದ್ಯಮಶೀಲತಾ ಶಕ್ತಿಗೆ ಬೆಂಗಳೂರು ಅನ್ವರ್ಥವಾಗಿದೆ. ಕರ್ನಾಟಕವು 16,000 ಕ್ಕೂ ಹೆಚ್ಚು ನವೋದ್ಯಮಗಳಿಗೆ ನೆಲೆಯಾಗಿದೆ ಮತ್ತು ಭಾರತದ ಒಟ್ಟು ನವೋದ್ಯಮ ನಿಧಿಗೆ ಸುಮಾರು 47% ರಷ್ಟನ್ನು ರಾಜ್ಯವು ಕೊಡುಗೆ ನೀಡಿದೆ ಎಂಬುದನ್ನು ಹೇಳುವುದಕ್ಕೆ ಸಂತೋಷವಾಗುತ್ತಿದೆ ಎಂದರು.
ಭಾರತದ ಐಟಿ ರಫ್ತಿನಲ್ಲಿ ನಾವು 42% ಕೊಡುಗೆ ನೀಡುತ್ತೇವೆ, ಇದರ ಮೌಲ್ಯ 3.2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು, ಮತ್ತು ಈ ಪ್ರಗತಿ ವರ್ಷದಿಂದ ವರ್ಷಕ್ಕೆ 27% ರಷ್ಟು ವೇಗವಾಗಿ ಬೆಳೆಯುತ್ತಿದೆ. ರಾಜ್ಯವು 550 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ, ಇದು ಭಾರತದ ಒಟ್ಟು ಕಂಪನಿಯ ಮೂರನೇ ಒಂದು ಭಾಗವಾಗಿದೆ. ಬೆಂಗಳೂರು ಸೆಮಿಕಂಡಕ್ಟರ್, ಏರೋಸ್ಪೇಸ್, ರಕ್ಷಣಾ, ಬಯೋಟೆಕ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಅನಿಮೇಷನ್ ಮತ್ತು ಗೇಮಿಂಗ್ ಮತ್ತು ಡೀಪ್ -ಟೆಕ್‌ಗಳಿಗೆ ಪ್ರಮುಖ ಕೇಂದ್ರವಾಗಿದೆ ಎಂದು ವಿವರಿಸಿದರು.
ಕರ್ನಾಟಕ ಯಾವಾಗಲೂ ಭಾರತವನ್ನು ಮುನ್ನಡೆಸಿದೆ. ನಾವು 1997 ರಲ್ಲಿಯೇ ಭಾರತದ ಮೊದಲ ತಂತ್ರಜ್ಞಾನ ನೀತಿಯನ್ನು ರೂಪಿಸಿದ್ದೇವೆ ಮತ್ತು ಹೊಸ ನೀತಿಗಳೊಂದಿಗೆ ಈ ನಾಯಕತ್ವವನ್ನು ಮುಂದುವರಿಸುತ್ತಿದ್ದೇವೆ. ವಿದೇಶಿ ಬಂಡವಾಳ ಹೂಡಿಕೆ, ಜಾಗತಿಕ ಸಹಭಾಗಿತ್ವ ಹಾಗೂ ಬಹುರಾಷ್ಟ್ರೀಯ ಹೂಡಿಕೆಗಳಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಡೀಪ್ ಸೈನ್ಸ್ ಮತ್ತು ಸುಧಾರಿತ ಇಂಜಿನಿಯರಿಂಗ್ ವ್ಯವಸ್ಥೆ ಒದಗಿಸಲು ರಾಜ್ಯ ಬದ್ಧವಾಗಿದ್ದು, ಎಐ, ಸೈಬರ್-ಭದ್ರತೆ, ದತ್ತಾಂಶ ವಿಜ್ಞಾನ, ಅನಿಮೇಷನ್ ಮತ್ತು ರೊಬೊಟಿಕ್ಸ್ನಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಕ್ವಾಂಟಮ್ ತಂತ್ರಜ್ಞಾನದ ಮಾರ್ಗಸೂಚಿಗಳನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಮೂಲಕ ತಂತ್ರಜ್ಞಾನ ಆರ್ಥಿಕತೆಯ ವಿಕೇಂದ್ರೀಕರಣಕ್ಕೆ ಮುಂದಾಗಿರುವ ನಮ್ಮ ಸರ್ಕಾರ, ಮುಂದಿನ ಪೀಳಿಗೆಗಾಗಿ ಟೈರ್ 2 ನಗರಗಳನ್ನು ನಾವಿನ್ಯತೆಯ ಕ್ಲಸ್ಟರ್ ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ ಪ್ರತಿ ಜಿಲ್ಲೆಯೂ ಹಾಗೂ ಯುವಪೀಳಿಗೆಯು ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುವ ಅವಕಾಶವನ್ನು ನೀಡಲಾಗಿದೆ. ನಮ್ಮ ಆಡಳಿತದ ಮಾದರಿಯು ಪಾರದರ್ಶಕತೆ, ನಿರೀಕ್ಷಿತ ನಡೆ ಹಾಗೂ ಸ್ಥಿರತೆಗೆ ಬದ್ಧವಾಗಿದೆ. ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿ ಮುಂದುವರಿಯುವಂತೆ ಮಾಡಲಾಗಿದೆ. ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವಾಗಲಿ, ಸ್ಟಾರ್ಟ್ ಅಪ್ ಆಗಲಿ, ಶೈಕ್ಷಣಿಕ ಸಂಶೋಧನೆಯಾಗಲಿ, ಯಾವುದೇ ಕ್ಷೇತ್ರದ ಬಂಡವಾಳ ಹೂಡಿಕೆ ಕರ್ನಾಟಕ ರಾಜ್ಯ ತಾಣವಾಗಿವೆ. ಏಐ , ಕ್ವಾಂಟಮ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ವಿಫುಲ ಅವಕಾಶಗಳನ್ನು ಬಳಸಿಕೊಂಡು ಮಾನವ ಪ್ರಗತಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಮುಖ್ಯಮಂತ್ರಿ ಕರೆ ನೀಡಿದರು.


