Saturday, December 20, 2025
Menu

ವಿಶೇಷ ಚೇತನರಿಗಾಗಿ ಸಮಗ್ರ ಕೌಶಲ್ಯ ಮತ್ತು ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸದಾ ಬದ್ಧ

sharanu prakash patil

ಬೆಂಗಳೂರು, ಡಿಸೆಂಬರ್ 20: ವಿಶೇಷ ಚೇತನರ ಬಗ್ಗೆ ಯಾರೂ ಕನಿಷ್ಠ ಭಾವನೆ ಹೊಂದಬೇಕಾಗಿಲ್ಲ. ಅವರಿಗೆ ದೇವರು ವಿಶೇಷವಾದ ಶಕ್ತಿಯನ್ನು ಕೊಟ್ಟಿರುತ್ತಾನೆ. ಹೀಗಾಗಿ ಅವರು ಸಮರ್ಥರು. ಅವರಿಗೆ ಕೌಶಲ್ಯಪೂರ್ಣ ಮತ್ತು ಉತ್ತಮ ಸಮಾಜವನ್ನು ನಿರ್ಮಿಸಲು ಕರ್ನಾಟಕ ಸರ್ಕಾರ ಸದಾ ಬದ್ಧವಾಗಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.

ಶನಿವಾರ ಕೆಎಸ್‌ಡಿಎ, ಕೆಎಸ್‌ಡಿಸಿ ಮತ್ತು ಅಸಿಸ್‌ಟೆಕ್ ಫೌಂಡೇಶನ್ ಜಂಟಿಯಾಗಿ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ವಿಶೇಷ ಚೇತನರಿಗಾಗಿ ಆಯೋಜಿಸಲಾದ “ಜಾಬ್ ಹಬ್ಬ”ವನ್ನು ಉದ್ದೇಶಿಸಿ ಸಚಿವರು ಮಾತನಾಡಿದರು.

ಈ ಕಾರ್ಯಕ್ರಮವು ಅಂಗವಿಕಲ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ತರಬೇತಿ ಪಾಲುದಾರರು ಮತ್ತು ನಾಗರಿಕ ಸಮಾಜವನ್ನು ಒಟ್ಟುಗೂಡಿಸಿದೆ. ನಿಜಕ್ಕೂ ಇದೊಂದು ಅಪರೂಪದ ಕಾರ್ಯಕ್ರಮ ಎಂದರು.

ಒಂದು ರಾಜ್ಯ ಸಮಗ್ರವಾಗಿ ಬೆಳವಣಿಗೆಯಾಗಬೇಕಾದರೆ ಎಲ್ಲರನ್ನು ಒಳಗೊಂಡ ಪ್ರಗತಿ ಮುಖ್ಯ ಇದಕ್ಕೆ ಸೂಕ್ತ ಆರ್ಥಿಕತೆಯ ಅವಶ್ಯಕತೆಯೂ ಇದೆ ಎಂದು ಡಾ. ಪಾಟೀಲ್ ಹೇಳಿದರು.

ಕರ್ನಾಟಕದಲ್ಲಿ 20 ಲಕ್ಷಕ್ಕೂ ಹೆಚ್ಚು ವಿಶೇಷ ಚೇತನರಿದ್ದಾರೆ ಎಂಬ ಮಾಹಿತಿ ಇದೆ. ಇವರಿಗೆ ಶಿಕ್ಷಣ ಮತ್ತು ಉದ್ಯೋಗ ಎರಡರಲ್ಲೂ ಅವಕಾಶಗಳನ್ನು ಒದಗಿಸಲು ನಮ್ಮ ಸರ್ಕಾರವು ಹೊಸ ನೀತಿಯನ್ನು ರೂಪಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಸಚಿವರು ವಿವರಿಸಿದರು.

“ಕಾರ್ಪೊರೇಟ್ ಕ್ಷೇತ್ರದಲ್ಲಿ ವಿಶೇಷ ಚೇತನರ ಸಂಖ್ಯೆ ಕಡಿಮೆ ಇದೆ. ಈ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆ ತರುವ ತುರ್ತು ಅವಶ್ಯಕತೆಯಿದೆ” ಎಂದು ಅವರು ಹೇಳಿದರು.

ವಿಶೇಷ ಚೇತನರಿಗೆ ಖಾಸಗಿ ವಲಯದಲ್ಲಿ 5% ಉದ್ಯೋಗ ಮೀಸಲಾತಿ ಕಲ್ಪಿಸಲು ಸರ್ಕಾರ ಈಗಾಗಲೇ “ಕರ್ನಾಟಕ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಚೇತನ ವ್ಯಕ್ತಿಗಳ ಹಕ್ಕುಗಳ ಮಸೂದೆ 2025” ವಿಧೇಯಕವನ್ನು ಜಾರಿಗೆ ತಂದಿದೆ. ಇದು ದೇಶದಲ್ಲಿ ಅತ್ಯಂತ ಪರಿಣಾಮಕಾರಿ ಕಾನೂನಾಗಿದೆ. ಇದಲ್ಲದೇ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನೀತಿ 2025–32 ಅನ್ನೂ ನಾವು ರೂಪಿಸಿದ್ದೇವೆ ಎಂದರು.

ಕೌಶಲ್ಯ, ಕೈಗಾರಿಕಾ ಪಾಲುದಾರಿಕೆ, ಮೂಲಸೌಕರ್ಯ ಮತ್ತು ತಂತ್ರಜ್ಞಾನಕ್ಕೆ ಪೂರಕವಾದ ತರಬೇತಿ ನೀಡಲು ನಮ್ಮ ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿಯವರ ಕೌಶಲ್ಯ ಕರ್ನಾಟಕ ಯೋಜನೆಯು (CMKKY) ವಿಶೇಷ ಚೇತನ ವ್ಯಕ್ತಿಗಳಿಗೆ ತರಬೇತಿ ನೀಡಲು ಅವಕಾಶ ಒದಗಿಸಿದೆ ಎಂದರು.

ರಾಜ್ಯದಾದ್ಯಂತ ಹೆಚ್ಚಿನ ಅಭ್ಯರ್ಥಿಗಳು ಕೌಶಲ್ಯ ಮತ್ತು ನಿರ್ದಿಷ್ಟ ತರಬೇತಿ ಪಡೆಯಲು ಅವಕಾಶ ಒದಗಿಸಲು ನಾವು ಬದ್ಧವಾಗಿದ್ದೇವೆ. ಎಐ ತಂತ್ರಜ್ಞಾನ, ವರ್ಚುವಲ್ ಉದ್ಯೋಗ ಅವಕಾಶಗಳನ್ನು ಒದಗಿಸಲು ಅಸಿಸ್‌ಟೆಕ್‌ ಫೌಂಡೇಶನ್‌ ಸಹಯೋಗ ಅಗತ್ಯ ಎಂದು ಸಚಿವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ಈ ರೀತಿಯ ನೇಮಕಾತಿಯು “ಸ್ಮಾರ್ಟ್ ಎಕನಾಮಿಕ್ಸ್‌ ಆಗಿದೆ ಹೊರತು ಚಾರಿಟಿ ರೀತಿಯಲ್ಲ. ಉದ್ಯೋಗದಾತರು ವೈವಿಧ್ಯತೆ, ನಾವೀನ್ಯತೆಗೆ ಹೆಚ್ಚು ಆದ್ಯತೆ ನೀಡಬೇಕು. ಈ ಜಾಬ್‌ ಹಬ್ಬದ ಮೂಲಕ ಕರ್ನಾಟಕದಿಂದ ಕೆಲವು ಯಶಸ್ವಿ ಕಥೆಗಳು ಹೊರಹೊಮ್ಮಲಿ. ಈ ನಿಟ್ಟಿನಲ್ಲಿ ಈ ವೇದಿಕೆ ಮುನ್ನಡೆಯಲಿ ಎಂದು‌ ಪಾಟೀಲ್‌ ಶುಭ ಕೋರಿದರು.

ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎನ್‌ಎಂ ನಾಗರಾಜ, ಅಸಿಸ್‌ಟೆಕ್ ಸಹ ಸಂಸ್ಥಾಪಕ ಪ್ರತೀಕ್, ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯ್ಕ್, ಬಿಎಂಎಸ್ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ರಘುಕುಮಾರ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *