ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಯನ್ನು ವಿರೋಧಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಾದ ವಿವಾದಗಳನ್ನು ಆಲಿಸಿದ ಕರ್ನಾಟಕ ಹೈ ಕೋರ್ಟ್ ನಾಳೆ ಸೆಪ್ಟೆಂಬರ್ 23, ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಸಲು ಉದ್ದೇಶಿಸಿರುವ ಸಮೀಕ್ಷೆಯ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್ ಗೆ ಮನವಿ ಮಾಡಿದ್ದರು. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, 420 ಕೋಟಿ ವೆಚ್ಚ ಮಾಡಿ, ಶಿಕ್ಷಕರು, ಆಶಾ ಕಾರ್ಯಕರ್ತೆಯರ ಮೂಲಕ ಬೃಹತ್ ಸರ್ವೆ ಮಾಡಲಾಗುತ್ತಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮ ಜಾರಿಗೆ ಅಂಕಿಅಂಶ ಸಂಗ್ರಹಿಸಲಾಗುತ್ತಿದೆ. ಈಗ ಮಧ್ಯಂತರ ತಡೆ ಬೇಕಿಲ್ಲವೆಂದು ವಾದಿಸಿದ್ದರು.
ತಡೆಯಾಜ್ಞೆ ನೀಡಲು ನಿರಾಕರಿಸಿದ ಸಿಜೆ ವಿಭು ಬಖ್ರು ಮತ್ತು ನ್ಯಾ.ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠವು , ಅರ್ಜಿದಾರರು ಹಾಗೂ ಸರ್ಕಾರಿ ವಕೀಲರು ವಾದಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ ಎಂದು ಸೂಚಿಸಿ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.
ಸಂವಿಧಾನಾತ್ಮಕವಾಗಿ ಸಮಾಜದಲ್ಲಿ ಯಾರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವವರೋ, ಅಂತವರಿಗೆ ಸರ್ಕಾರದಿಂದ ಸೂಕ್ತ ಮತ್ತು ಸಮರ್ಪಕ ಮೀಸಲು ಸವಲತ್ತು ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರವೂ ಜಾತಿ ಸಮೀಕ್ಷೆ ನಡೆಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಜಾತಿ ಗಣತಿಯ ಕೆಲವೊಂದು ಅಂಶಗಳು ಬಹುತೇಕ ಜಾತಿ, ಸಮುದಾಯದಲ್ಲಿ ಗೊಂದಲ ಮತ್ತು ಜಟಿಲತೆಯನ್ನು ಹುಟ್ಟು ಹಾಕಿವೆ. ಕ್ರಿಶ್ಚಿಯನ್ ಎಂಬ ಉಪಪದವನ್ನು ಹಿಂದು ಜಾತಿಗಳಿಗೆ ಸೇರಿಸುವ ಆಯೋಗದ ತೀರ್ಮಾನಕ್ಕೆ ಒಕ್ಕಲಿಗ ವೀರಶೈವ ಮೊದಲಾದ ಸಮುದಾಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇನ್ನು ಕೆಲ ಜಾತಿಗಳು ಸರ್ಕಾರ ಕೈಗೆತ್ತಿಕೊಂಡ ಸಮೀಕ್ಷೆಯನ್ನು ಕೈ ಬಿಡಲು ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿವೆ. ಹಾಗಾಗಿ ಸಿದ್ದರಾಮಯ್ಯ ಸರ್ಕಾರದ ಜಾತಿಗಣತಿ ಸಮೀಕ್ಷೆಯ ಭವಿಷ್ಯ ನಾಳೆ ಮಧ್ಯಾಹ್ನ ಹೈಕೋರ್ಟ್ ನೀಡುವ ಆದೇಶವನ್ನ ಅವಲಂಬಿಸಿದೆ.