ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಸಮೀಕ್ಷೆ ನಡೆಸುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಕೆಲವೊಂದು ಷರತ್ತುಗಳನ್ನು ವಿಧಿಸಿ, ಜಾತಿ ಗಣತಿ ಮುಂದುವರಿಸಲು ಅವಕಾಶ ನೀಡಿ ಸಿಜೆ ವಿಭು ಭಕ್ರು ಅವರ ನೇತೃತ್ವದ ವಿಭಾಗೀಯ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಕಳೆದ ಮೂರು ದಿನದಿಂದ ಅರ್ಜಿದಾರರು, ರಾಜ್ಯ ಸರ್ಕಾರದ ಹಾಗೂ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಪರವಾಗಿ ವಕೀಲರ ವಾದ-ಪ್ರತಿವಾದ ಆಲಿಸಿದ ನಂತರ ಹೈಕೋರ್ಟ್ ಸಮೀಕ್ಷೆಯನ್ನು ಮುಂದುವರಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಜನ ಗಣತಿಯ ದತ್ತಾಂಶವನ್ನು ಆಯೋಗವು ಸರಕಾರ ಸೇರಿದಂತೆ ಯಾರಿಗೂ ಬಹಿರಂಗಪಡಿಸಬಾರದು. ದತ್ತಾಂಶದ ಗೌಪ್ಯತೆಯನ್ನು ಆಯೋಗ ರಕ್ಷಿಸಬೇಕು. ಜನರು ಸ್ವಯಂಪ್ರೇರಣೆಯಿಂದ ನೀಡಿದರಷ್ಟೇ ಮಾಹಿತಿ ಪಡೆಯಬೇಕು. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು, ಮಾಹಿತಿ ನೀಡುವಂತೆ ಯಾವುದೇ ಒತ್ತಡ ಹಾಕಬಾರದೆಂದು ಹೈಕೋರ್ಟ್ ಸೂಚಿಸಿದೆ.
ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಪ್ರಶ್ನೆ ಮಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ರಾಜ್ಯ ಒಕ್ಕಲಿಗರ ಸಂಘ, ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ರಾಜ್ಯ ಸರ್ಕಾದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಸಮೀಕ್ಷೆಯನ್ನು ಜಾತಿಗಣತಿ ಎಂದು ಕರೆಯುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ʼʼಮೊದಲಿಗೆ ಇದು ಜಾತಿಗಣತಿಯಲ್ಲ ಎಂದು ಹೇಳಬಯಸುತ್ತೇನೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸರ್ವೆ. ಸರ್ಕಾರದ ನೀತಿ ನಿರೂಪಣೆಗೆ ಪೂರಕವಾಗಿ ಸರ್ವೆಯಾಗಿದೆ. ಸಾಮಾಜಿಕ ಕಲ್ಯಾಣ ಕಾರ್ಯಗಳಿಗೆ ಪೂರಕವಾಗಿ ಸರ್ವೆ ನಡೆಸಲಾಗುತ್ತಿದೆ. ಈ ಆಧಾರದಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಬಾರದುʼʼ ಎಂದು ಹೇಳಿದ್ದರು.