Menu

ಚಾರಣಿಗರಿಗೆ ಟ್ರ್ಯಾಕಿಂಗ್ ಆ್ಯಪ್, ವಿಮೆ ಕಡ್ಡಾಯಗೊಳಿಸಿದ ರಾಜ್ಯ ಸರ್ಕಾರ

eshwar khandre

ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣಿಗರ ಸುರಕ್ಷತೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ, ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ, ಚಾರಣಿಗರ ಮೊಬೈಲ್‌ನಲ್ಲಿ ಕಡ್ಡಾಯವಾಗಿ ಟ್ರ್ಯಾಕಿಂಗ್ ಆ್ಯಪ್ ಅಳವಡಿಕೆ ಹಾಗೂ ಪ್ರತಿಯೊಬ್ಬರಿಗೂ ವಿಮೆ ಸೌಲಭ್ಯ ಜಾರಿಗೆ ತರುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.

ಕೊಡಗಿನ ತಡಿಯಂಡಮೋಲ್ ಬೆಟ್ಟದಲ್ಲಿ ಯುವತಿ ಚಾರಣಕ್ಕೆ ಹೋಗಿ ದಾರಿ ತಪ್ಪಿ ನಾಪತ್ತೆಯಾಗಿದ್ದರು. ನಾಲ್ಕು ದಿನಗಳ ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಅವರನ್ನು ರಕ್ಷಿಸಲಾಯಿತು. ಈ ಹಿನ್ನೆಲೆ ರಾಜ್ಯದ ಎಲ್ಲಾ ಅರಣ್ಯ ಪ್ರದೇಶಗಳಲ್ಲೂ ಚಾರಣಿಗರಿಗೆ ಸಮಗ್ರ ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಚಾರಣಿಗರು ಕಾಡಿನಲ್ಲಿ ದಾರಿ ತಪ್ಪದಂತೆ ಮತ್ತು ತುರ್ತು ಸಂದರ್ಭದಲ್ಲಿ ಅವರನ್ನು ಪತ್ತೆಹಚ್ಚಲು ಮೊಬೈಲ್ ಟ್ರ್ಯಾಕಿಂಗ್ ಆ್ಯಪ್ ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಸಚಿವರು ಸೂಚಿಸಿದ್ದಾರೆ. ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಿಗೆ ಸ್ಯಾಟಲೈಟ್ ಆಧಾರಿತ ಸಾಧನಗಳ ಬಳಕೆಯ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ.

ಚಾರಣಕ್ಕೆ ಹೋಗುವ ಪ್ರತಿಯೊಬ್ಬರಿಗೂ ವಿಮೆ ಜಾರಿಗೆ ತರುವ ಪ್ರಸ್ತಾಪವಿದೆ, ಚಾರಣಿಗರಿಗೆ ಆರ್ಥಿಕ ರಕ್ಷಣೆ ನೀಡಲು ಇದು ಸಹಕಾರಿಯಾಗಲಿದೆ. ವಿಮೆಯ ವ್ಯಾಪ್ತಿ ಮತ್ತು ಮೊತ್ತದ ಕುರಿತು ಶೀಘ್ರದಲ್ಲೇ ಮಾರ್ಗಸೂಚಿ ಪ್ರಕಟವಾಗಲಿದೆ.
ಚಾರಣಿಗರು ‘ಅರಣ್ಯ ವಿಹಾರ’ ಪೋರ್ಟಲ್ ಮೂಲಕ ಮೊದಲೇ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಅಕ್ರಮವಾಗಿ ಅಥವಾ ಪೂರ್ವಾನುಮತಿ ಇಲ್ಲದೆ ಅರಣ್ಯ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಅನುಮತಿ ಇಲ್ಲದೆ ಚಾರಣ ಮಾಡಿದವರ ವಿರುದ್ಧ ದಂಡ ಮತ್ತು ಕಾನೂನು ಕ್ರಮಕ್ಕೆ ಅವಕಾಶವಿದೆ.

ಪ್ರತಿ ಚಾರಣಿಗರ ತಂಡದ ಜೊತೆ ಸ್ಥಳೀಯ ಅರಣ್ಯ ಇಲಾಖೆಯ ಮಾರ್ಗದರ್ಶಿಗಳು ಇರುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾರ್ಗದರ್ಶಿಗಳಿಗೆ ತರಬೇತಿ ನೀಡಲಾಗುವುದು. ಅಪಾಯಕಾರಿ ಪ್ರದೇಶಗಳು, ವನ್ಯಜೀವಿಗಳ ಸಂಚಾರ, ಹವಾಮಾನ ಬದಲಾವಣೆ ಕುರಿತು ಮಾರ್ಗದರ್ಶಿಗಳು ಚಾರಣಿಗರಿಗೆ ತಿಳಿಸಬೇಕು. ಪ್ರತಿದಿನ ಒಂದು ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರ ಪ್ರವೇಶಾವಕಾಶ ನೀಡಲಾಗುವುದು. ಇದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗಲಿದೆ.

ಪ್ರತಿ ಅರಣ್ಯ ಪ್ರದೇಶಕ್ಕೆ ಒಂದು ತುರ್ತು ಕಂಟ್ರೋಲ್ ರೂಂ ಸ್ಥಾಪಿಸಲು ಸಚಿವರು ಸೂಚನೆ ನೀಡಿದ್ದಾರೆ. ಚಾರಣಿಗರು ತೊಂದರೆಗೆ ಸಿಲುಕಿದರೆ, ಈ ಕಂಟ್ರೋಲ್ ರೂಂಗೆ ಕರೆ ಮಾಡಬಹುದು. ರಕ್ಷಣಾ ತಂಡಗಳು 24×7 ಸಜ್ಜಾಗಿರುತ್ತವೆ.
ಪೂರ್ವಾನುಮತಿ ಇಲ್ಲದೆ ಅರಣ್ಯ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜನರ ಪ್ರಾಣದ ಬೆಲೆ ತುಂಬಾ ದೊಡ್ಡದು. ಆಕಸ್ಮಿಕಗಳನ್ನು ತಡೆಯುವುದು ನಮ್ಮ ಕರ್ತವ್ಯ, ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ 15 ದಿನಗಳಲ್ಲಿ ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸಬೇಕು ಎಂದು ಖಂಡ್ರೆ ಸೂಚಿಸಿದ್ದಾರೆ.

Related Posts

Leave a Reply

Your email address will not be published. Required fields are marked *