Tuesday, February 10, 2026
Menu

ಮೆಟ್ರೊಗೆ ರಾಜ್ಯಸರ್ಕಾರ 5,066 ಸಾವಿರ ಕೋಟಿ ರೂ. ಕೊಟ್ಟಿದೆ, ದರ ನಿಗದಿಯಲ್ಲಿ ಸಾಧ್ಯವಿರುವ ಪ್ರಯತ್ನ ಮಾಡಲಾಗುವುದು: ಡಿಸಿಎಂ

dk shivakumar

ಬೇರೆ ಮೆಟ್ರೋಗಳಿಗೆ ಹೋಲಿಸಿದರೆ ನಮ್ಮ ಮೆಟ್ರೋ ದರ ಪಟ್ಟಿ ಹೆಚ್ಚಿದೆ ಎಂದು ಹೇಳುತ್ತಾರೆ. ಉದಾಹರಣೆಗೆ ದೆಹಲಿಯಲ್ಲಿ ಭದ್ರತಾ ವಿಭಾಗದ ಜವಾಬ್ದಾರಿ ಕೇಂದ್ರ ಸರ್ಕಾರದ ಅಡಿಯಲ್ಲಿದೆ. ಸಿಎಸ್‌ಎಫ್‌ ಅಲ್ಲಿನ ಜವಾಬ್ದಾರಿ ತೆಗೆದುಕೊಂಡಿದೆ. ಇಲ್ಲಿ ನಾವೇ ಭದ್ರತೆಯ ಜವಾಬ್ದಾರಿ ಹೊತ್ತಿದ್ದೇವೆ. ಜೊತೆಗೆ ನಾವು ಇಲ್ಲಿ ಇದಕ್ಕೆ ಜಿಎಸ್‌ ಟಿಯನ್ನೂ ಸಹ ಪಾವತಿಸುತ್ತಿದ್ದೇವೆ. ಕ್ಯಾಶ್‌ ಲಾಸ್‌ ಮರುಪಾವತಿಗೆ ಎಂದು 1064.32 ಸಾವಿರ ಕೋಟಿ ರೂ. ರಾಜ್ಯ ಸರ್ಕಾರ ನೀಡಿದೆ. ಸಾಲ ಮರುಪಾವತಿಗೆ ಎಂದು ಕೇಂದ್ರ ಸರ್ಕಾರಕ್ಕೆ 4,002.23 ಕೋಟಿ ರೂ. ನೀಡಿದ್ದೇವೆ. ಒಟ್ಟು 5,066. 55 ಕೋಟಿ ರೂ. ಕೊಟ್ಟಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಶಿವಕುಮಾರ್ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ  ಮಾತನಾಡಿ,ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ಉಂಟಾಗಿರುವ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದರು. ದರ ಏರಿಕೆ ತಡೆ ಎಷ್ಟು ಸಮಯ ಎಂದು ಕೇಳಿದಾಗ, “ಪ್ರತಿಯೊಂದಕ್ಕೂ ಹಂತಗಳಿವೆ. ಒಂದೆರಡು ದಿನಗಳಲ್ಲಿ ಎಂದು ಹೇಳಲು ಆಗುವುದಿಲ್ಲ” ಎಂದು ಹೇಳಿದರು.

ಹಲವಾರು ಕಡೆ ಮೆಟ್ರೋ ಇದ್ದರೂ ಇಲ್ಲಿ ಮಾತ್ರ ರಾಜಕೀಯ ಮಾಡಲಾಗುತ್ತಿದೆಯೇ ಎಂದು ಕೇಳೀದಾಗ, “ಇಲ್ಲಿ ಕೇವಲ ಟ್ರಂಕ್‌ ಗಳು, ದನಿ, ಮೈಕ್‌ ಮಾತ್ರ ಇವೆ. ದೆಹಲಿ, ಮುಂಬೈ ಹೈದರಾಬಾದ್‌ ಹೀಗೆ ಎಲ್ಲಾದರೂ ಮಾತನಾಡಿದ್ದಾರಾ? ಎಲ್ಲಿಯೂ ಮಾತನಾಡಿಲ್ಲ. ದೆಹಲಿಯಲ್ಲಿ ಸಂಸದರೊಬ್ಬರು ವಾದ ಮಾಡುತ್ತಿದ್ದಾರೆ. ನೀವು (ಮಾಧ್ಯಮಗಳು) ಅವರ ಫೋಟೋ ಹಾಕುತ್ತಿರಿ” ಎಂದು ತಿವಿದರು.

ದರ ಏರಿಕೆಯಲ್ಲಿ ನಮ್ಮ ಪಾಲಿಲ್ಲ ಎಂದು ಕೇಂದ್ರಕ್ಕೆ ಪತ್ರ ಬರೆಯಿರಿ ಎಂದು ಆರ್‌.ಆಶೋಕ್‌  ಹೇಳಿರುವ ಬಗ್ಗೆ ಕೇಳಿದಾಗ, “ಮಾಧ್ಯಮದ ಮುಂದೆ ಅವರು ಏನು ಬೇಕಾದರೂ ತಿಳಿಸಲಿ. ಏನು ಬೇಕು ಎಂದು ನನಗೆ ತಿಳಿಸಿದರೆ, ನಾನು ಅದಕ್ಕೆ ಉತ್ತರ ನೀಡುತ್ತೇನೆ” ಎಂದರು.

ಹೊಸ ದರ ನಿಗದಿ ಸಮಿತಿಗೆ ಒತ್ತಾಯ ಮಾಡುವಿರಾ ಎಂದು ಕೇಳಿದಾಗ, “ಸದ್ಯಕ್ಕೆ ಈ ಗೊಂದಲಕ್ಕೆ ನಾನು ಹೋಗುವುದಿಲ್ಲ. ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿ ಸಿದ್ದರಾಮಯ್ಯ ಅವರು ಹಾಗೂ ಡಿ.ಕೆ.ಶಿವಕುಮಾರ್‌ ಏನು ಮಾಡಲು ಸಾಧ್ಯವೋ ಅದನ್ನು ಮಾಡಲಾಗುವುದು. ಇದು ನಮ್ಮ ಭೂಮಿ. ನಮ್ಮ ಗ್ರಾಹಕರಿಗೆ ಯಾವ ರೀತಿ ಸಹಾಯ ಮಾಡಲಾಗುವುದೋ ಆ ದಾರಿಯನ್ನು ಹುಡುಕಲಾಗಿದೆ. ಮರು ಲೆಕ್ಕಾಚಾರ ಮಾಡಿ ಎಂದು ಸೂಚನೆ ನೀಡಿದ್ದೇನೆ. ಯಾವುದೇ ಸಂಸ್ಥೆಯಾದರೂ ಅಲ್ಲಿನ ಖರ್ಚುವೆಚ್ಚದಲ್ಲಿ ವ್ಯತ್ಯಯ ಉಂಟಾಗುತ್ತಿರುತ್ತದೆ. ಅದೇ ರೀತಿ ಇಲ್ಲಿ ಇಂಧನ ದರ ಏರಿಕೆ ಸೇರಿದಂತೆ ಇತರೇ ಲೆಕ್ಕಾಚಾರಗಳು ಇರುತ್ತವೆ” ಎಂದರು.

ದರ ಏರಿಕೆ ನಿರ್ಧಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆಯೇ ಎಂದು ಕೇಳಿದಾಗ, “ಯಾರ ವ್ಯಾಪ್ತಿಗೂ ಬರುವುದಿಲ್ಲ. ದರ ಪರಿಷ್ಕರಣಾ ಸಮತಿಯ ಅಡಿಯಲ್ಲಿ ಬರುತ್ತದೆ. ಈ ಮೊದಲು ರಾಜ್ಯ ಸರ್ಕಾರದವರು ಈ ಸಮಿತಿಯಲ್ಲಿ ಇರುತ್ತಿದ್ದರು. ಈಗ ಇಲ್ಲ. ಹಳೇ ಸಮಿತಿ ಅನ್ವಯ ದರ ಪರಿಷ್ಕರಣೆ ಮಾಡಲು ಅಧಿಕಾರವಿಲ್ಲ. ಹೊಸ ಸಮಿತಿ ರಚನೆ ಆಗುವ ತನಕ ಕೇಂದ್ರ, ರಾಜ್ಯ, ಬಿಎಂಆರ್‌ಸಿಎಲ್‌ ಯಾರಿಗೂ ಅಧಿಕಾರವಿಲ್ಲ” ಎಂದು ಡಿಸಿಎಂ ಉತ್ತರಿಸಿದರು.

ನಮಗೆ ಯಾವುದೇ ರೀತಿಯ ನಿರ್ದೇಶನ ನೀಡುವ ಹಾಗೂ ಹಸ್ತಕ್ಷೇಪ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇಲ್ಲ. ದೆಹಲಿ ಮೆಟ್ರೋ ಅಳವಡಿಸಿಕೊಂಡಿರುವ ಸೂತ್ರದ ಅನ್ವಯದಂತೆ ಹೊಸದಾಗಿ ಲೆಕ್ಕಾಚಾರ ಮಾಡಲು ತಿಳಿಸಿದ್ದೇನೆ. ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ದೆಹಲಿಯಲ್ಲಿ ಸಭೆ ಕರೆಯುತ್ತಾರೆ ಎಂದುಕೊಂಡಿದ್ದೆ.  ದೆಹಲಿ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ. ತಾತ್ಕಾಲಿಕ ಜಯ ಎಂದು ಹೇಳುತ್ತಿರುವವರು ಇಂದು ಬೋರ್ಡ್‌ ಮೀಟಿಂಗ್‌ ಮಾಡಿ ನಿರ್ದೇಶನ ನೀಡಬೇಕಿತ್ತು ಎಂದರು.

“ಇತರ ರಾಜ್ಯಗಳ ಮೇಲೆ ಮೆಟ್ರೋ ನಿಗಮದ ಬಳಿ, ವಿಷಯ ತಜ್ಞರು, ಕೇಂದ್ರದ ತಜ್ಞರ ಬಳಿ ಇದರ ಬಗ್ಗೆ ಚರ್ಚೆ ನಡೆಸಿ ಗಮನಿಸಿದಾಗ ಹೊಸ ಸಮಿತಿ ರಚನೆಯಾಗುವ ತನಕ ಈ ರೀತಿ ಶಿಫಾರಸ್ಸು ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ. ಹೊಸ ಸಮಿತಿ ಇದರ ಬಗ್ಗೆ ನಿರ್ದೇಶನ ನೀಡುತ್ತದೆ. ಪತ್ರ ಬರೆದಿರುವವರಿಗೆ ಈ ಬಗ್ಗೆ ಗೊತ್ತಿಲ್ಲ ಎಂದೇನಲ್ಲ. ಅವರು ದಡ್ಡರಲ್ಲ ಎಂದು ಕೊಂಡಿದ್ದೇನೆ. ನಾವು ದರ ಏರಿಕೆ ಮಾಡಿ ಎಂದು ಕೇಳಿಲ್ಲ. ಈ ಹಿಂದಿನ ಸಮಿತಿ ಏನು ತೀರ್ಮಾನ ಮಾಡಿದೆ ಅದರಂತೆ ಮುನ್ನಡೆದಿದೆ” ಎಂದು ವಿವರಿಸಿದರು.

ನಮ್ಮಿಂದ ದರ ಏರಿಕೆಗೆ ತಡೆ ಬಿದ್ದಿದೆ ಎಂದು ಹೇಳುತ್ತಿರುವವರ ಬಗ್ಗೆ ಕೇಳಿದಾಗ, “ಇದರಿಂದ ಹೆಸರನ್ನು ಯಾರು ಬೇಕಾದರೂ ತೆಗೆದುಕೊಳ್ಳಲಿ. ಅಂತಿಮವಾಗಿ ಜನರಿಗೆ ಒಳ್ಳೆಯದಾಗಬೇಕು ಅಷ್ಟೇ. ಜನರಿಗೆ ಒಳ್ಳೆಯದಾಗಬೇಕು ಎಂದು ಯುದ್ಧ ಮಾಡುತ್ತಿರುವೆ. ನನಗೆ ಅಂತಿಮವಾಗಿ ಬಿಎಂಆರ್‌ ಸಿಎಲ್‌ ಸಂಸ್ಥೆ ಹಾಗೂ ಜನರೂ ಉಳಿಬೇಕು” ಎಂದರು.

“ ಮೆಟ್ರೋ ದರ ಏರಿಕೆ ಬಗ್ಗೆ ತೀರ್ಮಾನವಾಗಿರುವುದು ಈಗಲ್ಲ. ಒಂದು ವರ್ಷದ ಹಿಂದೆ.  ಶೇ.5 ರಷ್ಟು ದರ ಏರಿಕೆಯನ್ನು 9.02.26 ರಂದು ಮಾಡಬೇಕು ಎಂದು ದರ ಏರಿಕೆ ಸಮಿತಿ ಅಂದೇ ಆದೇಶ ನೀಡಿದೆ. ಈಗ ಮಾತನಾಡುತ್ತಿರುವವರು ಯಾರು  ಅವತ್ತು ಇದರ ಬಗ್ಗೆ ಮಾತನಾಡಲಿಲ್ಲ. ಬೆಂಗಳೂರಿನ ಜನತೆ ಗೌರವದಿಂದ ಇದನ್ನು ಸ್ವೀಕಾರ ಮಾಡಿದ್ದಾರೆ” ಎಂದು ಕುಟುಕಿದರು.

“ದರ ಏರಿಕೆಯನ್ನು ತಡೆಯುವುದರ ಕುರಿತಂತೆ ರಾಜ್ಯ ಸರ್ಕಾರ, ಅಧಿಕಾರಿಗಳು ಒಂದು ತೀರ್ಮಾನ ಮಾಡಿದ್ದೇವೆ. ಬಿಎಂಆರ್‌ ಸಿಎಲ್‌ ದರ ಏರಿಕೆಗೆ ಮೂರು ಮುಖ್ಯ ಮಾನದಂಡಗಳಿವೆ. ಓಎಂಆರ್‌ ವೆಚ್ಚ, ಬದಲಾಗುವ ಸಿಪಿಐ, ಸಿಬ್ಬಂದಿ ವೆಚ್ಚ, ಪ್ರತಿ ಯುನಿಟ್‌ ವೆಚ್ಚ, ಇಂಧನ ವೆಚ್ಚವನ್ನು ಲೆಕ್ಕಚಾರ ಮಾಡಲು ಅವಕಾಶವಿದೆ. ಇವುಗಳ ಆಧಾರದ ಮೇಲೆ ಮತ್ತೊಮ್ಮೆ ಮರು ಲೆಕ್ಕಚಾರವನ್ನು ಮಾಡಿಕೊಂಡು ಬನ್ನಿ ಎಂದು ನಮ್ಮ ಸರ್ಕಾರ ಮಾರ್ಗದರ್ಶನ ನೀಡಿದೆ. ಅಲ್ಲಿಯವರೆಗೂ ದರ ಏರಿಕೆಯನ್ನು ತಡೆಯಿಡಿಯಿರಿ ಎಂದು ಸೂಚನೆ ನೀಡಿದ್ದೇನೆ” ಎಂದರು.

“ನನ್ನನ್ನು ದೆಹಲಿಗೆ ಕರೆದಿರುವ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದೇನೆ. ದೆಹಲಿ ಪ್ರವಾಸದಲ್ಲಿ ರಾಜಕಾರಣ ಜೊತೆಗೆ ಕೇಂದ್ರ ಜಲಶಕ್ತಿ ಸಚಿವರು, ಕಾನೂನು ತಜ್ಞರನ್ನು ಭೇಟಿ ಮಾಡುತ್ತಿರುವೆ” ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ  ಶಿವಕುಮಾರ್  ಪ್ರತಿಕ್ರಿಯೆ ನೀಡಿದರು.

ಬಜೆಟ್‌ ಸಭೆಯ ನಡುವೆ ದೆಹಲಿ ಭೇಟಿ ಬಗ್ಗೆ ಕೇಳಿದಾಗ ಹಾಗೂ ರಾಹುಲ್‌ ಗಾಂಧಿ ನಿಮ್ಮನ್ನು ಕರೆಯುತ್ತಿದ್ದಾರೆಯೇ ಎಂದು ಎಂದಾಗ, “ಭೇಟಿ ಮಾಡುವ ಎಲ್ಲಾ ಹೆಸರನ್ನು ಹೇಳಲು ಆಗುವುದಿಲ್ಲ. ನಿಮಗೆ ಏಕೆ ಇಷ್ಟು ಕುತೂಹಲ. ನಾನು ಉಪಮುಖ್ಯಮಂತ್ರಿ , ಕೆಪಿಸಿಸಿ ಅಧ್ಯಕ್ಷ ಕೂಡ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಮಾರ್ಚ್‌ 10 ಕ್ಕೆ 6 ವರ್ಷವಾಗುತ್ತದೆ. ನಮ್ಮ ಸಂಸದರನ್ನು, ನಾಯಕರನ್ನು ಭೇಟಿ ಮಾಡುವುದು ನನ್ನ ಕರ್ತವ್ಯ. ನಾನು ಭೇಟಿ ಮಾಡುತ್ತಾ ಇರುತ್ತೇನೆ, ಆಗ ನನ್ನ ಕಷ್ಟ, ದುಃಖ, ದುಮ್ಮಾನ, ನಿಮ್ಮ ಸಂತೋಷ, ಬಯಕೆ ಎಲ್ಲಾ ಹೇಳುತ್ತಾ ಇರುತ್ತೇನೆ” ಎಂದರು.

ನಿಮ್ಮ ಇಲಾಖೆಗೆ ಸಂಬಂಧಿಸಿದಂತೆ ಬಜೆಟ್ ಪೂರ್ವಸಿದ್ಧತಾ ಸಭೆ ಕರೆದಿದ್ದು, ನೀವು ದೆಹಲಿ ಹೋಗುತ್ತಿದ್ದೀರಿ ಎಂದು ಕೇಳಿದಾಗ, “ನಾನು ಸಿಎಂ ಅನುಮತಿ ಪಡೆದುಕೊಳ್ಳುತ್ತಿದ್ದೇನೆ. ನೀರಾವರಿ ಇಲಾಖೆಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿದ್ದು,  ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ನನಗಿಂತ ಸಿಎಂ ಅವರಿಗೆ ನೀರಾವರಿ ಯೋಜನೆಗಳ ಬಗ್ಗೆ ಹೆಚ್ಚು ಗೊತ್ತಿದೆ. ಮೇಕೆದಾಟು ಯೋಜನೆ ಬಗ್ಗೆ ಅಧಿಕಾರಿಗಳು ಭೇಟಿ ಮಾಡಿದ್ದಾರೆ” ಎಂದು ಉತ್ತರಿಸಿದರು.

Related Posts

Leave a Reply

Your email address will not be published. Required fields are marked *