Wednesday, September 10, 2025
Menu

ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಕರೆ ತರಲು ರಾಜ್ಯ ಸರ್ಕಾರ ಕ್ರಮ

ನೇಪಾಳದಲ್ಲಿ ವಿದ್ಯಾರ್ಥಿ-ಯುವಜನರ ಕ್ಷಿಪ್ರ ಬೃಹತ್ ಪ್ರತಿಭಟನೆ ಕಾರಣಕ್ಕೆ ಅಲ್ಲಿ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದೆ. ಪರಿಣಾಮವಾಗಿ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಿಲುಕಿರುವ 39 ಮಂದಿ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.

ಮುಖ್ಯ ಕಾರ್ಯದರ್ಶಿ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಂಡು ಅಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿ ಇದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರು ವಿವಿಧ ತಂಡಗಳಲ್ಲಿ ಇರುವ ಕನ್ನಡಿಗರ ಸಂಪರ್ಕದಲ್ಲಿದ್ದಾರೆ.  ರಾಜ್ಯ ಸರ್ಕಾರದ ಅಧಿಕಾರಿಗಳು ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ.

ನೇಪಾಳ ಪ್ರಯಾಣ, ಪ್ರವಾಸವನ್ನು ಮುಂದೂಡಲು ಕೇಂದ್ರ ವಿದೇಶಾಂಗ ಇಲಾಖೆ ಸೂಚಿಸಿ ನೇಪಾಳದಲ್ಲಿರುವ ಭಾರತೀಯ ರಾಯಭಾರ ಅಧಿಕಾರಿಗಳ ಸಲಹೆ ಪರಿಗಣಿಸಿ ಮಾರ್ಗಸೂಚಿ ಪ್ರಕಟಿಸಿದೆ. ನೇಪಾಳದಲ್ಲಿರುವ ಭಾರತೀಯರಿಗೂ ಸೂಚನೆ ನೀಡಲಾಗಿದ್ದು, ಯಾವುದೇ ಸಂದರ್ಭದಲ್ಲೂ ನೆರವಿನ ಅಗತ್ಯವಿದ್ದರೆ, ಸಹಾಯವಾಣಿಗೆ ಕರೆ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹಲವು ಸಾವು ನೋವುಗಳಾಗಿದೆ. ಪ್ರತಿಭಟನೆ ಹಾಗೂ ಹಿಂಸಾಚಾರದಲ್ಲಿ ಮಡಿದ ಕುಟುಂಬಕ್ಕೆ ಭಗವಂತ ನೋವು ಭರಿಸವು ಶಕ್ತಿ ನೀಡಲಿ. ಗಾಯಾಳುಗಳು ಶೀಘ್ರದಲ್ಲೇ ಚೇತರಿಸಿಕೊಳ್ಳಲಿ ಎಂದು ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತೀಯರಿಗೆ ನೆರವಿನ ಅಗತ್ಯವಿದ್ದರೆ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಲು ಸೂಚಿಸಲಾಗಿದೆ. ಸಹಾಯವಾಣಿ ಸಂಖ್ಯೆ +977–980 860 2881, +977–981 032 6134 ಸಂಪರ್ಕಿಸಬಹುದಾಗಿದೆ.

Related Posts

Leave a Reply

Your email address will not be published. Required fields are marked *