ಬೆಂಗಳೂರು: ದೀಪಾವಳಿ ಪ್ರಯುಕ್ತ ಬಲಿಪಾಡ್ಯಮಿ ದಿನ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲ ದೇವಾಲಯಗಳಲ್ಲಿ ಗೋಪೂಜೆ ನೆರವೇರಿಸಲು ಮುಜರಾಯಿ ಇಲಾಖೆ ಸೂಚನೆ ನೀಡಿದೆ.
ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಸುತ್ತೋಲೆ ಹೊರಡಿಸಿದ್ದು, ಧಾರ್ಮಿಕ ದತ್ತಿ ಇಲಾಖೆ, ರಾಜ್ಯದ ಮುಜರಾಯಿ ಅಧಿಸೂಚಿತ ದೇವಾಲಯಗಳಲ್ಲಿ ಬಲಿಪಾಡ್ಯಮಿ ದಿನದಂದು ಗೋಪೂಜೆ ಕಾರ್ಯಕ್ರಮ ಆಚರಿಸಲು ನಿರ್ದೇಶನ ನೀಡಿದ್ದಾರೆ.
ಹಿಂದೂ ಧರ್ಮದಲ್ಲಿ ಗೋವಿಗೆ ಗೋಮಾತೆ ಎಂಬ ಹೆಸರಿನಿಂದ ವಿಶೇಷ ಸ್ಥಾನಮಾನ ನೀಡಿ ಪೂಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾದ ಗೋವುಗಳ ಮಹತ್ವ ಮತ್ತು ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದ್ದು ಬಲಿಪಾಡ್ಯಮಿಯಂದು ಗೋವುಗಳಿಗೆ ಸ್ನಾನ ಮಾಡಿಸಿ, ಅರಿಶಿನ, ಕುಂಕುಮ ಹಾಗು ಹೂವುಗಳಿಂದ ಅಲಂಕರಿಸಿ ಅಕ್ಕಿ, ಬೆಲ್ಲ, ಹಣ್ಣು ಮುಂತಾದ ಗೋಗ್ರಾಸವನ್ನು ನೀಡಿ ಸಂಜೆ ಗೋಪೂಜೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಲಾಗಿದೆ.
ವಿದ್ಯಾರ್ಥಿ ಮೇಲೆ ಸಂಸ್ಕೃತ ಶಿಕ್ಷಕನ ಮೇಲೆ ಹಲ್ಲೆ
ವಿದ್ಯಾರ್ಥಿ ಮೇಲೆ ಹಲ್ಲೆ, ಕ್ರಮಕ್ಕೆ ಸೂಚನೆ: ಚಿತ್ರದುರ್ಗ ವೇದಾಧ್ಯಯನ ವಿದ್ಯಾರ್ಥಿ ಮೇಲೆ ನಡೆದ ಹಲ್ಲೆ ಪ್ರಕರಣವಾಗಿ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ 37 ವೇದ ಸಂಸ್ಕೃತ ಪಾಠ ಶಾಲೆಗಳಿವೆ. ಎರಡು ಶಾಲೆಗಳನ್ನು ನಮ್ಮ ಇಲಾಖೆಯಿಂದ ನಡೆಸುತ್ತೇವೆ. ಉಳಿದ ಶಾಲೆ ಖಾಸಗಿಯವರು ನಡೆಸುತ್ತಾರೆ. ಚಿತ್ರದುರ್ಗದಲ್ಲಿ ನಡೆದ ಘಟನೆಯಲ್ಲಿ ಶಿಕ್ಷಕನ ವರ್ತನೆ ಅಮಾನುಷ. ಅಧಿಕಾರಿಗಳಿಗೆ ಕೂಡಲೇ ಸೂಚನೆ ಕೊಟ್ಟಿದ್ದೇನೆ. ವರದಿ ಪಡೆದು ಕೂಡಲೇ ಕ್ರಮಕ್ಕೆ ಸೂಚಿಸಿದ್ದೇನೆ. ಮ್ಯಾನೇಜ್‌ಮೆಂಟ್ ಮೇಲೂ ಕ್ರಮ ಆಗಲಿದೆ. ಶಿಕ್ಷಕರ ಮೇಲೂ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
‘ಬಿಜೆಪಿ ಎಷ್ಟು ರಾಜ್ಯಗಳಿಗೆ ಹಣ ಕಳುಹಿಸಿತ್ತು?’
ಬಿಜೆಪಿ ಇಲ್ಲಿ ಅಧಿಕಾರದಲ್ಲಿದ್ದಾಗ ಬೇರೆ ಬೇರೆ ರಾಜ್ಯಗಳಲ್ಲಿ ಚುನಾವಣೆ ಆಯ್ತು. ಆಗ ಎಷ್ಟು ರಾಜ್ಯಗಳಿಗೆ ಬಿಜೆಪಿ ಹಣ ಕಳಿಸಿತ್ತು?. ನಾಲ್ಕೂ ಜನ ಬಿಜೆಪಿಯ ಸಿಎಂಗಳು ಬೇರೆ ರಾಜ್ಯಕ್ಕೆ ಎಷ್ಟು ಹಣ ಕಳಿಸಿದ್ರು, ಉತ್ತರ ಕೊಡಲಿ. ಪಕ್ಷಾಂತರ ನಿಷೇಧ ಕಾಯ್ದೆಗೆ ತಿಲಾಂಜಲಿ ಕೊಟ್ಟವರು ಅವರು. ಭ್ರಷ್ಟಾಚಾರದ ಗಂಗೋತ್ರಿ ಇವರೇ ಬಿಜೆಪಿಯವರು. ಈಗ ಹರಿಶ್ಚಂದ್ರರು ಅಂತ ಹೇಳಿಕೊಳ್ತಾರೆ. ಗುತ್ತಿಗೆದಾರರ ಸಂಘ ಶೇ.40% ಆರೋಪ ಮಾಡಿದ್ರಲ್ಲ. ಅದೇ ಹಣವನ್ನು ಯಾರು ಯಾರಿಗೆ ಕಳಿಸಿದ್ರಿ ಅಂತ ಬಿಜೆಪಿ ಉತ್ತರ ಕೊಡಲಿ. ಇವರಂತೆ ಕಪ್ಪು ಹಣ ಬಿಳಿ ಹಣವನ್ನು ಬೇರೆ ರಾಜ್ಯಕ್ಕೆ ಕಳುಹಿಸುವವರು ನಾವಲ್ಲ ಎಂದರು.