ಅರಣ್ಯದಲ್ಲಿ ಚಿತ್ರೀಕರಣ ಮಾಡುವವರಿಗೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಪ್ರದೇಶದ ಚಿತ್ರೀಕರಣದಿಂದ ಆಗಬಹುದಾದ ತೊಂದರೆಗಳು ಹಾಗೂ ಇದಕ್ಕೆ ಸಂಬಂಧಿಸಿದ ಅಪರಾಧಗಳ ಗಂಭೀರತೆ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿರುವುದನ್ನು ಗಮನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಸರ್ಕಾರ ತಿಳಿಸಿದೆ.
‘ಟಾಕ್ಸಿಕ್’ ಚಿತ್ರತಂಡದವರ ಮೇಲೆ ಮರ ಕಡಿದ ಆರೋಪವಿದ್ದು, ‘ಕಾಂತಾರ’ ತಂಡ ಬಾಂಬ್ ಸ್ಫೋಟ್ ಮಾಡಿ ಅರಣ್ಯದಲ್ಲಿ ಬೆಂಕಿ ಹಚ್ಚಿದ ಆರೋಪ ಎದುರಿಸುತ್ತಿದ್ದು, ಇದು ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಿದೆ. ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸಿನಿಮಾ, ಧಾರಾವಾಹಿ, ಸಾಕ್ಷ್ಯಚಿತ್ರ ಇತ್ಯಾದಿಗಳನ್ನು ಚಿತ್ರೀಕರಿಸಲು ಶುಲ್ಕ ಪಡೆದು ಅನುಮತಿ ನೀಡಲಾಗುತ್ತಿದೆ. ಚಿತ್ರೀಕರಣದ ಕಾರಣ ಅರಣ್ಯ ಪ್ರದೇಶದ ಗೌಪ್ಯ ಮಾಹಿತಿಯು ಹೊರ ಜಗತ್ತಿಗೆ ದೊರೆಯುವ ಸಂಭವವಿರುತ್ತದೆ. ಅರಣ್ಯ ಮತ್ತು ವನ್ಯಜೀವಿಗಳ ಸೂಕ್ಷ್ಮತೆಯ ಅರಿವಿಲ್ಲದೆ ಪರಿಸರ ಹಾಗೂ ಜೀವ ವೈವಿಧ್ಯಕ್ಕೆ ಧಕ್ಕೆ ಉಂಟಾಗುವ ಸಾಧ್ಯವಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಅರಣ್ಯ ಹಾಗೂ ವನ್ಯ ಜೀವಿಗಳನ್ನು ಸಂರಕ್ಷಿಸಿ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ, ಅರಣ್ಯ ಹಾಗೂ ವನ್ಯಜೀವಿಗಳನ್ನು ಉಳಿಸುವ ಉದ್ದೇಶದಿಂದ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಯಾವುದೇ ಬಗೆಯ ಚಿತ್ರೀಕರಣಕ್ಕೆ ಕಡ್ಡಾಯವಾಗಿ ಸರ್ಕಾರದ ವತಿಯಿಂದ ಅನುಮತಿ ಪಡೆಯಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.