ಸರ್ಕಾರದ ನೀತಿ ಮತ್ತು ಯೋಜನೆಗಳನ್ನು ಅಂತರ್ಜಾಲ ಬಳಕೆದಾರರಿಗೆ ಡಿಜಿಟಲ್ ಜಾಹೀರಾತುಗಳ ಮೂಲಕ ತಲುಪಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ – 2024 ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು ಡಿಜಿಟಲ್ ಜಾಹೀರಾತಿಗಾಗಿ ಡಿಜಿಟಲ್ ಜಾಹೀರಾತು ಏಜೆನ್ಸಿ ಮತ್ತು ಡಿಜಿಟಲ್ ಮಾಧ್ಯಮಗಳನ್ನು ಎಂಪ್ಯಾನಲ್‌ಮೆಂಟ್ ಮಾಡಿ ಕೊಳ್ಳುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಡಿಜಿಟಲ್ ಏಜೆನ್ಸಿ ಮತ್ತು ಮಾಧ್ಯಮಗಳನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಂಪ್ರದಾಯಿಕ ಜಾಹೀರಾತುಗಳಿಗಿಂತ ಡಿಜಿಟಲ್ ಜಾಹೀರಾತು ಹೆಚ್ಚು ಪ್ರಭಾವಶಾಲಿಯಾಗಿದೆ. ಹೆಚ್ಚು ವ್ಯಾಪ್ತಿ ಮತ್ತು ನಿರ್ದಿಷ್ಟ ಜನರನ್ನು ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯಕ್ರಮಗಳು ಮತ್ತು ನೀತಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹಾಗೂ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಮಾದರಿಯಲ್ಲಿ ಡಿಜಿಟಲ್ ಜಾಹೀರಾತು ನೀಡಲು ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿಯನ್ನು ಸರ್ಕಾರ ಹೊರತಂದಿದೆ ಎಂದು ಹೇಳಿದ್ದಾರೆ.
ಹೊಸ ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಅನ್ವಯ ಎಲ್ಲಾ ಇಲಾಖೆಗಳು, ನಿಗಮಗಳು, ಪ್ರಾಧಿಕಾರಗಳು, ಮಂಡಳಿಗಳು, ಸ್ಥಳೀಯಾಡಳಿತಗಳು, ಪುರಸಭೆಗಳು, ನಗರ ಪಾಲಿಕೆಗಳು ಮೊದಲಾದವುಗಳಲ್ಲಿ ಡಿಜಿಟಲ್ ಜಾಹೀರಾತುಗಳನ್ನು ಕಡ್ಡಾಯವಾಗಿ ಈ ಮಾರ್ಗಸೂಚಿಗೆ ಅನುಸಾರವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಬಿಡುಗಡೆ / ಪೂರೈಸಬೇಕಾಗಿದೆ. ಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ ಅನ್ವಯ ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಾದ ಗೂಗಲ್ (ಯೂಟ್ಯೂಬ್), ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಬಿಸಿನೆಸ್, ವಾಟ್ಸಾಪ್ ಚಾನಲ್), ಸರ್ಚ್ ಇಂಜಿನ್‌ಗಳಾದ ಗೂಗಲ್, ಬಿಂಗ್, ಸಾಮಾಜಿಕ ಜಾಲತಾಣಗಳಾದ ಎಕ್ಸ್ (ಈ ಹಿಂದೆ ಟ್ವಿಟರ್), ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಲಿಂಕ್‌ಡ್‌ಇನ್, ವಾಟ್ಸಾಪ್, ಸ್ನಾಪ್‌ಚಾಟ್, ಟೆಲಿಗ್ರಾಂ, ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೇಜಾನ್ ಫ್ರೈಮ್, ಡಿಸ್ನಿ ಹಾಟ್‌ಸ್ಟಾರ್ ಸೋನಿಲೈವ್, ಜಿಯೋ ಸಿನಿಮಾ, ಜೀ 5, ವೂಟ್, ಸನ್ ನೆಕ್ಸ್ಟ್ ಮತ್ತು ಟಾಕೀಸ್, ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳಾದ ಪೇಟಿಎಂ, ಪೋನ್‌ಪೇ ಮತ್ತು ಜಿಪೇ ಸೇರಿದಂತೆ ಇನ್ನಿತರ ಡಿಜಿಟಲ್ ವೇದಿಕೆಗಳಡಿ ಜಾಹೀರಾತು ಅರ್ಹ ಏಜೆನ್ಸಿಗಳ ಮೂಲಕ ನೀಡಲು ಅವುಗಳನ್ನು ಎಂಪ್ಯಾನಲ್ ಮಾಡಿಕೊಳ್ಳಲು ವಾರ್ತಾ ಇಲಾಖೆ ಕ್ರಮ ಕೈಗೊಂಡಿದೆ.