ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು 17ನೇ ಬಜೆಟ್ ಮಂಡಿಸಲಿದ್ದಾರೆ. ಈ ವರ್ಷದ ರಾಜ್ಯ ಬಜೆಟ್ ಗಾತ್ರ 4.50 ಲಕ್ಷ ಕೋಟಿ ರೂ. ತಲುಪುವ ಸಾಧ್ಯತೆ ಇದೆ ಎಂದು ಹಣಕಾಸು ಇಲಾಖೆ ಅಂದಾಜಿಸಿದೆ. ಇಂದಿನಿಂದ ಮಾರ್ಚ್ 27ರವರೆಗೆ ಕರ್ನಾಟಕ ಬಜೆಟ್ ಅಧಿವೇಶನ ನಡೆಯಲಿದೆ.
2026–27ನೇ ಸಾಲಿನ ರಾಜ್ಯದ ಆಯವ್ಯಯದ ಬಜೆಟ್ ಭಾಷಣವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ರಾಜ್ಯದ ಆಯ್ದ ಬಸ್ ನಿಲ್ದಾಣಗಳಲ್ಲಿರುವ ಎಲ್‌ಇಡಿ ಮತ್ತು ಟಿವಿ ಪರದೆಗಳ ಮೂಲಕ ಮೊತ್ತ ಮೊದಲ ಬಾರಿಗೆ ನೇರ ಪ್ರಸಾರ ಮಾಡುತ್ತಿದೆ.
ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದ ಜನತೆಗೆ ತಲುಪಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ. ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಐಪಿಆರ್)ಯು ಬೆಂಗಳೂರು ಮೂಲದ ವೃತ್ತಿ ಮೀಡಿಯಾ ಸಲ್ಯೂಷನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದಾದ್ಯಂತ ಇರುವ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಡಿಜಿಟಲ್ ಡಿಸ್ಪ್ಲೇ (ಎಲ್‌ಇಡಿ) ಮತ್ತು ಟಿವಿ ಪರದೆಗಳ ಮೂಲಕ ಬಜೆಟ್ ಮಂಡನೆಯ ನೇರ ಪ್ರಸಾರ ಮಾರ್ಚ್ 6 ರಂದು ಬೆಳಿಗ್ಗೆ 10.15 ಗಂಟೆಯಿಂದ ಆಗಲಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ವಿಧಾನಸೌಧದಲ್ಲಿ ನಡೆಯುವ ಬಜೆಟ್ ಮಂಡನೆ ಹಾಗೂ ನಂತರ ನಡೆಯಲಿರುವ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯನ್ನೂ ಇದೇ ಪರದೆಗಳ ಮೂಲಕ ರಾಜ್ಯದ ಬಸ್ ನಿಲ್ದಾಣಗಳಲ್ಲಿ ನೇರವಾಗಿ ಪ್ರಸಾರ ಮಾಡಲಾಗುತ್ತದೆ.
ರಾಜ್ಯದಲ್ಲಿಯೇ ಮೊದಲ ಬಾರಿಗೆ ಬಸ್ ನಿಲ್ದಾಣಗಳ ಮೂಲಕ ಜನಸಾಮಾನ್ಯರಿಗೆ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ತಲುಪಿಸುವ ಪ್ರಯತ್ನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೈಗೊಂಡಿದೆ. ಸಾರ್ವಜನಿಕರು ಈ ನೇರ ಪ್ರಸಾರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಆಯುಕ್ತರು ಮನವಿ ಮಾಡಿದ್ದಾರೆ.


