ಮಾರ್ಚ್ ಆರರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಬಜೆಟ್ ೨೦೨೬ ಮಂಡಿಸಲಿದ್ದಾರೆ. ಇದು ಅವರ 17ನೇ ಬಜೆಟ್ ಮಂಡನೆಯಾಗಲಿದೆ. ಮಾರ್ಚ್ 6ರಂದು ಬೆಳಗ್ಗೆ 10:15ಕ್ಕೆ ಸಿಎಂ ರಾಜ್ಯದ ಆಯವ್ಯಯವನ್ನು ಸದನದ ಮುಂದೆ ಮಂಡಿಸುವರು.
ಸಿಎಂ ಸಿದ್ದರಾಮಯ್ಯನವರು ಈಗಾಗಲೇ ಇಲಾಖೆಗಳ ಸಭೆ ನಡೆಸಿ ಬಜೆಟ್ ಮಂಡನೆಗೆ ಅಗತ್ಯ ತಯಾರಿಯಲ್ಲಿದ್ದಾರೆ. ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯಗಳ ಇಲಾಖೆಗಳಿಗೆ ಹೆಚ್ಚಿನ ಅನುದಾನ ನೀಡುವ ಕುರಿತು ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ, ಗ್ಯಾರಂಟಿ ಯೋಜನೆಗಳಿಗೆ ಬೇಕಾದ ಹಣವನ್ನು ಕ್ರೋಢೀಕರಣ, ಅಭಿವೃದ್ಧಿ ಕಾರ್ಯಗಳಿಗೆ ಧಕ್ಕೆ ಬಾರದಂತೆ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಬಜೆಟ್ ರೂಪಿಸುವ ಸವಾಲು ಇದೆ.
ಐದು ಗ್ಯಾರಂಟಿ ಯೋಜನೆಗಳಿಗೆ ಎಷ್ಟು ಸಾವಿರ ಕೋಟಿ ರೂ. ಮೀಸಲಿಡುತ್ತಾರೆ, ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಹೊಸ ಮತದಾರರ ಸೆಳೆಯುವ ಯೋಜನೆ ಘೋಷಿಸಬಹುದೇ ಎಂಬ ಕುತೂಹಲ ಎಲ್ಲರಲ್ಲಿದೆ. ಬೆಂಗಳೂರಿನ ಮೂಲ ಸೌಕರ್ಯಗಳಿಗೆ ಬಜೆಟ್ನಲ್ಲಿ ವಿಶೇಷ ಆದ್ಯತೆ ಸಿಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.


