ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಕರ್ನಾಟಕ ಬಜೆಟ್ 2026 ಕ್ಕೆ ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಪ್ರಮುಖ ಮುಖಂಡರಾಗಿರುವ ಅಕ್ಕೈ ಪದ್ಮಶಾಲಿ ಬಜೆಟ್ ಅಪ್ರಬುದ್ಧ ಎಂದು ಕರೆದಿದ್ದಾರೆ. ಈ ಸರ್ಕಾರಕ್ಕೆ ದೂರದೃಷ್ಟಿಯಿಲ್ಲ, ಇವರಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದ್ದಾರೆ.
ಸರ್ಕಾರ ನೀಡುವ ಸಣ್ಣಪುಟ್ಟ ಆರ್ಥಿಕ ನೆರವಿನ ಬದಲಿಗೆ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಸುಸ್ಥಿರ ‘ಲಿಂಗಾಂತರಿಗಳ ಕಲ್ಯಾಣ ಮಂಡಳಿ’ ಸ್ಥಾಪನೆಯಾಗಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ. ನಮಗೆ ಸಾವಿರ ರೂಪಾಯಿ ಭಿಕ್ಷೆ ಬೇಡ, ನಮ್ಮ ಹಕ್ಕುಗಳನ್ನು ರಕ್ಷಿಸುವ ಮತ್ತು ಗೌರವಯುತ ಬದುಕು ಕಟ್ಟಿಕೊಡುವ ಮಂಡಳಿ ಬೇಕು ಎಂದು ಮುಖ್ಯಮಂತ್ರಿಗಳ ನಡೆಯನ್ನು ಪ್ರಶ್ನಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ಸಿಎಂ, ಮಾಜಿ ದೇವದಾಸಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಅರಿಯಲು ರಾಜ್ಯಾದ್ಯಂತ ಸಮಗ್ರ ಸಮೀಕ್ಷೆ ನಡೆಸಲಾಗುವುದು ಎಂದು ಘೋಷಿಸಿದ್ದಾರೆ. ‘ಚೇತನ’ ಹಾಗೂ ‘ಧನಶ್ರೀ’ ಯೋಜನೆಗಳಡಿ ಫಲಾನುಭವಿಗಳಿಗೆ ನೀಡಲಾಗುತ್ತಿದ್ದ ವಾರ್ಷಿಕ 30,000 ರೂ. ಪ್ರೋತ್ಸಾಹ ಧನವನ್ನು ಈಗ 45,000 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಲಾಭವು ಈ ಸಮುದಾಯಗಳಿಗೂ ತಲುಪುವಂತೆ ನೋಡಿಕೊಳ್ಳಲು ವಿಶೇಷ ಅನುದಾನ ಮೀಸಲಿಡಲಾಗಿದೆ.
ಸಮೀಕ್ಷೆಗಳು ಮತ್ತು ಸಣ್ಣ ಪ್ರಮಾಣದ ಹಣದ ಏರಿಕೆಯಿಂದ ಲಿಂಗತ್ವ ಅಲ್ಪಸಂಖ್ಯಾತರ ಬದುಕಿನಲ್ಲಿ ದೊಡ್ಡ ಬದಲಾವಣೆ ಬರಲು ಸಾಧ್ಯವಿಲ್ಲ. ಶಾಶ್ವತ ಉದ್ಯೋಗಾವಕಾಶ, ಶಿಕ್ಷಣದಲ್ಲಿ ಮೀಸಲಾತಿ ಮತ್ತು ರಾಜಕೀಯ ಪ್ರಾತಿನಿಧ್ಯದಂತಹ ಮೂಲಭೂತ ಬದಲಾವಣೆಗಳ ನಿರೀಕ್ಷೆಯಲ್ಲಿದ್ದ ಸಮುದಾಯಕ್ಕೆ ಈ ಬಜೆಟ್ ನಿರಾಸೆ ಮೂಡಿಸಿದೆ ಎಂದು ಅಕ್ಕೈ ಪದ್ಮಶಾಲಿ ಹೇಳಿದ್ದಾರೆ.


