Menu

ಸಿದ್ದರಾಮಯ್ಯ ಸರ್ಕಾರದಿಂದ ರಾಜ್ಯದ ಭವಿಷ್ಯ ಅಡಮಾನ: ಬಜೆಟ್‌ಗೆ ಆರ್‌ ಅಶೋಕ ಟೀಕೆ

ashoka

“ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು” ಕೊಡುತ್ತೇವೆ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ @siddaramaiah ಸರ್ಕಾರ ಇಂದು ಕರ್ನಾಟಕದಲ್ಲಿ “ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ” ಎಂಬ ಸ್ಥಿತಿ ನಿರ್ಮಿಸಿದೆ. ಸಿದ್ದರಾಮಯ್ಯ ಸರ್ಕಾರದಿಂದ ರಾಜ್ಯದ ಭವಿಷ್ಯ ಅಡಮಾನ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಟೀಕಿಸಿದ್ದಾರೆ.

ರಾಜ್ಯ ಬಜೆಟ್‌ ಕುರಿತು ಪ್ರತಿಕ್ರಿಯಿಸಿರುವ ಅವರು, ಜನರ ಕೆಂಗಣ್ಣಿಗೆ ಗುರಿಯಾಗಿ ಮುಜುಗರಕ್ಕೀಡಾಗುವ ಪರಿಸ್ಥಿತಿ ಬಂದಾಗಲೆಲ್ಲ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರನ್ನು ದಿಕ್ಕು ತಪ್ಪಿಸುವ ಚಳಿಯನ್ನು ಬಜೆಟ್‌ನಲ್ಲಿಯೂ ಮುಂದುವರೆಸಿರುವ ಸಿದ್ದರಾಮಯ್ಯನವರು ಬಜೆಟ್ ಭಾಷಣದಲ್ಲೂ ಅದೇ ಚಾಳಿ ಪ್ರದರ್ಶನ ಮಾಡಿದ್ದಾರೆ. ರಾಜ್ಯದ ಆರ್ಥಿಕ ಭವಿಷ್ಯಕ್ಕೆ ಸ್ಪಷ್ಟ ದಿಕ್ಕು ನೀಡಬೇಕಾದ ಬಜೆಟ್‌ನಲ್ಲಿ ವಾಸ್ತವ ಸ್ಥಿತಿಗತಿಗಳನ್ನು ಪ್ರಾಮಾಣಿಕವಾಗಿ ಹೇಳುವ ಬದಲು ಕಟ್ಟು ಕಥೆಗಳನ್ನು ಹೇಳುತ್ತಾ ಕಾಲಹರಣ ಮಾಡಲಾಗಿದೆ ಎಂದಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಸಾಲದ ಪ್ರಮಾಣವೇ ಅದರ ಆರ್ಥಿಕ ನಿರ್ವಹಣೆಯ ನಿಜ ಮುಖವನ್ನು ಬಯಲಿಗೆಳೆಯುತ್ತದೆ. 2023–24ರಲ್ಲಿ ಸುಮಾರು ₹82,000 ಕೋಟಿ, 2024–25ರಲ್ಲಿ ₹1.05 ಲಕ್ಷ ಕೋಟಿ, 2025–26ರಲ್ಲಿ ₹1.16 ಲಕ್ಷ ಕೋಟಿ, ಮತ್ತು ಈಗ 2026–27ರ ಬಜೆಟ್ ಅಂದಾಜಿನಲ್ಲಿ ₹1.32 ಲಕ್ಷ ಕೋಟಿ ಸಾಲ ಮಾಡಲು ಯೋಜನೆ ರೂಪಿಸಲಾಗಿದೆ. ಅಂದರೆ ಕೇವಲ ನಾಲ್ಕು ವರ್ಷಗಳಲ್ಲಿ ಈ ಸರ್ಕಾರವು ಸುಮಾರು ₹4.4 ಲಕ್ಷ ಕೋಟಿ ಹೊಸ ಸಾಲ ಮಾಡುವ ಪರಿಸ್ಥಿತಿ ಉಂಟುಮಾಡಿದೆ. ಇದು ಅಭಿವೃದ್ಧಿಗಾಗಿ ಮಾಡಿದ ಸಾಲವೇ? ಅಥವಾ ಚುನಾವಣಾ ಗ್ಯಾರಂಟಿಗಳಿಗಾಗಿ ರಾಜ್ಯದ ಭವಿಷ್ಯವನ್ನು ಗಿರವಿ ಇಟ್ಟ ಸಾಲವೇ ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಮೂಡಿದೆ ಎಂದು ಬರೆದುಕೊಂಡಿದ್ದಾರೆ.

ರಾಜ್ಯದ ಹಣಕಾಸಿನ ವಾಸ್ತವ ಸ್ಥಿತಿ ಇನ್ನಷ್ಟು ಆತಂಕಕಾರಿಯಾಗಿದೆ. 2026–27ರಲ್ಲಿ ಕರ್ನಾಟಕದ ಒಟ್ಟು ರಾಜಸ್ವ ಆದಾಯ ಸುಮಾರು ₹3.15 ಲಕ್ಷ ಕೋಟಿ ಆಗಿದ್ದರೆ, ಕೇವಲ ಸಂಬಳ, ಪಿಂಚಣಿ ಮತ್ತು ಬಡ್ಡಿ ಪಾವತಿಗೆ ಹೋಗುತ್ತಿರುವ ಮೊತ್ತವೇ ಸುಮಾರು ₹2.77 ಲಕ್ಷ ಕೋಟಿ. ಅಂದರೆ ರಾಜ್ಯದ ಆದಾಯದ ಸುಮಾರು 88% ಕೇವಲ ಕಮಿಟೆಡ್ ವೆಚ್ಚಗಳಿಗೆ ಹೋಗುತ್ತಿದೆ. ಇದರ ಪರಿಣಾಮವಾಗಿ ಈ ವರ್ಷ ರಾಜಸ್ವ ಕೊರತೆ ₹22,957 ಕೋಟಿ, ಮತ್ತು ವಿತ್ತೀಯ ಕೊರತೆ ಸುಮಾರು ₹1,09,998 ಕೋಟಿ ತಲುಪಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣ ಮೀಸಲಿಡುವ ಬದಲು ಸಾಲದ ಬಲೆಗೆ ರಾಜ್ಯವನ್ನು ತಳ್ಳುತ್ತಿರುವುದು ಈ ಬಜೆಟ್‌ನ ಕಹಿ ಸತ್ಯ ಎಂದು ಕಿಡಿ ಕಾರಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಹಣಕಾಸಿನ ಶಿಸ್ತನ್ನು ಕಟ್ಟುನಿಟ್ಟಾಗಿ ಕಾಪಾಡಲಾಗಿತ್ತು. ರಾಜ್ಯದ ಸಾಲವು GSDP ಯ 25% ಒಳಗೆ ಇತ್ತು, ಫಿಸ್ಕಲ್ ಡೆಫಿಸಿಟ್ 3% ಒಳಗೆ ಇತ್ತು ಮತ್ತು ಹಲವಾರು ವರ್ಷಗಳಲ್ಲಿ ರಾಜಸ್ವ ಉಳಿಕೆ ಕೂಡ ಇತ್ತು. ಆದರೆ ಇಂದು ಸ್ಥಿತಿ ಸಂಪೂರ್ಣ ಬದಲಾಗಿದೆ. ಸಾಲ ಮಾಡಿ ಸಂಬಳ ಕೊಡುವ ಮಟ್ಟಕ್ಕೆ ರಾಜ್ಯವನ್ನು ತಳ್ಳಿರುವುದು ಈ @INCKarnataka ಸರ್ಕಾರದ ಆರ್ಥಿಕ ದುರಾಡಳಿತದ ಸ್ಪಷ್ಟ ಉದಾಹರಣೆ. ಅಭಿವೃದ್ಧಿಯ ಬದಲು ಸಾಲ, ಆರ್ಥಿಕ ಶಿಸ್ತಿನ ಬದಲು ಅರಾಜಕತೆ, ದೂರದೃಷ್ಟಿಯ ಬದಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕ್ಷುಲ್ಲಕ ರಾಜಕೀಯ, ಇದೇ @siddaramaiah ಅವರ ಬಜೆಟ್‌ನ ನಿಜಸ್ವರೂಪವಾಗಿದೆ ಎಂದು ಟೀಕಿಸಿದ್ದಾರೆ.

Related Posts

Leave a Reply

Your email address will not be published. Required fields are marked *