ಈ ಬಾರಿ ರಾಜ್ಯ ಬಜೆಟ್‌ನಲ್ಲಿ ಕೃಷಿ ವಲಯದ ಘಟಕಗಳಾಗಿರುವ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗಳನ್ನು ಘೋಷಿಸಿದ್ದಾರೆ. ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ “ಅನುಗ್ರಹ” ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಡಿ ಹಸು, ಎಮ್ಮೆ ಮತ್ತು ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು 10,000 ರೂ. ಗಳಿಂದ 15,000 ರೂ. ಗಳಿಗೆ, ಕುರಿ/ಮೇಕೆಗಳಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು 5,000 ರೂ. ಗಳಿಂದ 7,500 ರೂ. ಗಳಿಗೆ ಹಾಗೂ 3-6 ತಿಂಗಳ ಕುರಿ/ಮೇಕೆ ಮರಿಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 3,500 ರೂ.ಗಳಿಂದ 5,000 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
2025-26ನೇ ಸಾಲಿನಲ್ಲಿ 50 ನೂತನ ಪಶು ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು. 2025-26ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಬಾರ್ಡ್ ಸಹಯೋಗದೊಂದಿಗೆ ನಿರ್ಮಿಸಲಾಗುವುದು. ಅಮೃತ್ ಮಹಲ್ ಕಾವಲುಗಳಲ್ಲಿನ ಭೂ ಒತ್ತುವರಿ ತಡೆಯಲು ಹಾಗೂ ಅಮೃತ್ ಮಹಲ್ ರಾಸುಗಳಿಗೆ ಮೇವು ಲಭ್ಯವಾಗುವಂತೆ ಮಾಡಲು, ಅರಣ್ಯ ಇಲಾಖೆ ಹಾಗೂ ನರೇಗಾ ಸಹಯೋಗದೊಂದಿಗೆ ಮೇವಿನ ಮರಗಳ ನೆಡುತೋಪು ಅಭಿವೃದ್ಧಿಗೊಳಿಸಲಾಗುವುದು.
ರಾಜ್ಯದ ಹೆಮ್ಮೆಯ ದೇಶಿ ದನದ ತಳಿಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್ ಹಾಗೂ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಒದಗಿಸಲಾಗುವುದು. ಆಧುನಿಕ ಕುರಿ ಸಾಕಾಣಿಕೆ ಪದ್ಧತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಲಸೆ ಕುರಿಗಾರರಿಗೆ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತರಬೇತಿ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಮೀನುಗಾರಿಕೆ ಅಭಿವೃದ್ಧಿ : ರಾಜ್ಯದ ಮತ್ಸ್ಯ ಸಂಪತ್ತಿನ ರಕ್ಷಣೆಯೊಂದಿಗೆ ಸುಸ್ಥಿರ ಮೀನುಗಾರಿಕೆ ಹಾಗೂ ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿಯನ್ನು ರೂಪಿಸಲಾಗುವುದು. ಮಂಗಳೂರಿನಲ್ಲಿರುವ ಮೀನುಗಾರಿಕೆ ಕಾಲೇಜಿಗೆ ಪ್ರಸ್ತುತ ನಿಗದಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ದ್ವಿಗುಣಗೊಳಿಸಲಾಗುವುದು. ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು 30 ಕೋಟಿ ರೂ. ಒದಗಿಸಲಾಗುವುದು.
ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಆಯ್ದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು. ರಾಜ್ಯದಲ್ಲಿ ನೋಂದಣಿಯಾಗಿರುವ ಮೋಟರೀಕೃತ ದೋಣಿಗಳಲ್ಲಿ 15 ವರ್ಷ ಕಾಲಾವಧಿ ಮೀರಿರುವ ಹಳೆಯ ಇಂಜಿನ್‌ಗಳನ್ನು ಬದಲಾಯಿಸಿ, ಹೊಸ ಇಂಜಿನ್ ಖರೀದಿಸಲು ಶೇ.50 ರಷ್ಟು ಒಂದು ಲಕ್ಷ ರೂ. ಮಿತಿಗೊಳಪಟ್ಟು ಸಹಾಯಧನ ನೀಡಲಾಗುವುದು.
ಪ್ರವಾಸಿಗರಿಗೆ ಶುಚಿ-ರುಚಿಯಾದ ಪೌಷ್ಟಿಕ ಮೀನು ಖಾದ್ಯಗಳನ್ನು ಒದಗಿಸಲು ಮೈಸೂರಿನಲ್ಲಿ ಹೈ-ಟೆಕ್ ಮತ್ಸ್ಯದರ್ಶಿನಿಯನ್ನು ಪ್ರಾರಂಭಿಸಲಾಗುವುದು. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸಲು “ಮಲ್ಟಿ-ಲೆವೆಲ್ ಪಾರ್ಕಿಂಗ್” ವ್ಯವಸ್ಥೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು. ಆಳ ಸಮುದ್ರ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರಸ್ತುತ ಇರುವ ಮೀನುಗಾರಿಕೆ ದೋಣಿಗಳ ಉದ್ದದ ಮಿತಿಯನ್ನು ಸಡಿಲಿಸಲು ಕ್ರಮ ವಹಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.