ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿರುವುದು ಎಂಬ ನಟ ಕಮಲಹಾಸನ್ ಅವರ ಹೇಳಿಕೆಗೆ ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶ, ಖಂಡನೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಕಮಲಹಾಸನ್ ಅವರ ವಿರುದ್ಧ ಕಿಡಿ ಕಾರಿದ್ದಾರೆ.
ಕರವೇ ಅಧ್ಯಕ್ಷ ನಾರಾಯಣ ಗೌಡ, ಕನ್ನಡ ವಿದ್ವಾಂಸ ಪರುಷೋತ್ತಮ ಬಿಳಿಮಲೆ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು ಕಮಲಹಾಸನ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಕಮಲ್ ಹಾಸನ್ ಅವರ ಈ ಹೇಳಿಕೆಯು ದಕ್ಷಿಣ ಭಾರತದ ಜನತೆಯು ಹಿಂದಿ ಹೇರಿಕೆ ಸಾಮ್ರಾಜ್ಯಶಾಹಿಯ ವಿರುದ್ಧ ನಡೆಸುತ್ತಿರುವ ಒಗ್ಗಟ್ಟಿನ ಹೋರಾಟಕ್ಕೆ ಗಂಭೀರ ಹಾನಿಯುಂಟು ಮಾಡುತ್ತದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮೊದಲಾದ ದ್ರಾವಿಡ ಭಾಷೆಗಳು ಒಂದಾಗಿ ನಿಲ್ಲಬೇಕಾದ ಈ ಸಂದರ್ಭದಲ್ಲಿ ಈ ಜವಾಬ್ದಾರಿಯಿಲ್ಲದ ಹೇಳಿಕೆ ಭಾಷಿಕ ಸಮುದಾಯಗಳ ನಡುವೆ ಒಡಕು ಮತ್ತು ಭಿನ್ನಾಭಿಪ್ರಾಯವನ್ನು ಉಂಟುಮಾಡುತ್ತದೆ. ಇದು ಕೇವಲ ಕನ್ನಡಿಗರಿಗೆ ಅವಮಾನವಲ್ಲ, ದಕ್ಷಿಣ ಭಾರತದ ಎಲ್ಲ ಭಾಷೆಗಳ ಗೌರವಕ್ಕೆ ಧಕ್ಕೆ ತರುವ ಕೃತ್ಯ ಎಂದು ಕರವೇ ಅಧ್ಯಕ್ಷ ನಾರಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಆಗಬಾರದು ಎಂದು ಕನ್ನಡ ಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ಈ ಕೂಡಲೇ ಕಮಲ್ ಹಾಸನ್ ಕನ್ನಡದ ಕುರಿತು ನೀಡಿರುವ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು ಎಂದು ಕರವೇ ಅಧ್ಯಕ್ಷ ಶಿವರಾಮೆ ಗೌಡ ಹೇಳಿದ್ದಾರೆ.
ಕಮಲಹಾಸ್ ಅವರಿಗೆ ಭಾಷಾ ತಿಹಾಸದ ಬಗ್ಗೆ ಅರಿವು ಇಲ್ಲ, ಹೀಗಾಗಿ ಅವರು ಇಂಥ ಹೇಳಿಕೆ ನೀಡಿದ್ದಾರೆ. ಕನ್ನಡ ತಮಿಳಿನಿಂದ ಬಂದಿಲ್ಲ. ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು ಎಂದು ಕನ್ನಡಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಜೂನ್ 5ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಇಂದು ಬೆಂಗಳೂರಿಗೆ ಆಗಮಿಸಿದ್ದ ವೇಳೆ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್ ಹಾಸನ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಥಗ್ ಲೈಫ್’ ಪ್ರಚಾರ ಕಾರ್ಯಕ್ಕೆ ನಟ ಶಿವ ರಾಜ್ ಕುಮಾರ್ ಅತಿಥಿಯಾಗಿ ಭಾಗವಹಿಸಿದ್ದ ವೇದಿಕೆಯಲ್ಲೇ ಕಮಲಹಾಸನ್ ಈ ಹೇಳಿಕೆ ನೀಡಿದ್ದಾರೆ.
ಕನ್ನಡಿಗರ ಪ್ರೀತಿ, ಗೌರವಕ್ಕೆ ನಮಿಸುತ್ತಲೇ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದ ಕಮಲ್ ಹೇಳಿಕೆಗೆ ಕನ್ನಡಿಗರು ಕೆಂಡ ಕಾರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಥಗ್ ಲೈಫ್’ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ತ್ರಿಷಾ ಕೃಷ್ಣನ್, ಅಭಿರಾಮಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಮಣಿರತ್ನಂ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.