ನವದೆಹಲಿ: ಕನ್ನಡಿಗ ಕರುಣ್ ನಾಯರ್ 3 ವರ್ಷಗಳ ನಂತರ ಅಂದರೆ ಸುಮಾರು 1077 ದಿನಗಳ ನಂತರ ಮೊದಲ ಬಾರಿ ಐಪಿಎಲ್ ನಲ್ಲಿ ಆಡಲು ಅವಕಾಶ ಪಡೆದರೂ ಸ್ಫೋಟಕ ಬ್ಯಾಟಿಂಗ್ ನಿಂದ ಮಿಂಚು ಹರಿಸಿದ್ದಾರೆ.
ಭಾನುವಾರ ಡೆಲ್ಲಿಯಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕರುಣ್ ನಾಯರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದರು. ಅಲ್ಲದೇ 7 ವರ್ಷದ ನಂತರ ಮೊದಲ ಅರ್ಧಶತಕ ಬಾರಿಸಿ ಗಮನ ಸೆಳೆದರು.
ಮಧ್ಯಮ ಕ್ರಮಾಂಕದಲ್ಲಿ ಸಾಮಾನ್ಯವಾಗಿ ಆಡುವ ಕರುಣ್ ನಾಯರ್ 3 ವರ್ಷಗಳ ನಂತರ ಮೊದಲ ಬಾರಿ ಐಪಿಎಲ್ ನಲ್ಲಿ ಆಡುವ ಅವಕಾಶ ಪಡೆದಿದ್ದೂ ಅಲ್ಲದೇ ಮೂರನೇ ಕ್ರಮಾಂಕದಲ್ಲಿ ಆಡಲು ಅವಕಾಶ ಪಡೆದರು.
ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಕರುಣ್ ನಾಯರ್ ಸಿಕ್ಕ ಅವಕಾಶವನ್ನು ಕೈ ತುಂಬಾ ಬಾಚಿಕೊಂಡು 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೇ 40 ಎಸೆತಗಳಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್ ಸೇರಿದ 89 ರನ್ ಬಾರಿಸಿ ಗಮನ ಸೆಳೆದರು.
ಕರುಣ್ ನಾಯರ್ 2590 ದಿನಗಳ ನಂತರ ಅಂದರೆ ಸುಮಾರು 7 ವರ್ಷದ ನಂತರ ಅರ್ಧಶತಕ ಬಾರಿಸಿದರು. 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಇದೇ ಮುಂಬೈ ಇಂಡಿಯನ್ಸ್ ವಿರುದ್ಧ ಅರ್ಧಶತಕ ಸಿಡಿಸಿದ್ದರು. ಇದಾದ ನಂತರ ನಾಯರ್ ಬ್ಯಾಟ್ ನಿಂದ ಬಂದ ಮೊದಲ ಫಿಫ್ಟಿ ಆಗಿದೆ.
2022ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕೆಕೆಆರ್ ವಿರುದ್ಧ ಆಡಿದ್ದರು. ಆದರೆ ಹರಾಜಿನಲ್ಲಿ ಫ್ರಾಂಚೈಸಿಗಳನ್ನು ಸೆಳೆಯಲು ವಿಫಲರಾಗಿದ್ದ ಕರುಣ್ ನಾಯರ್ ಈ ಬಾರಿ ವಿದರ್ಭ ಪರ ಆಡಿದ್ದೂ ಅಲ್ಲದೇ 6 ಶತಕಗಳನ್ನು ಸಿಡಿಸಿ ಅತೀ ಹೆಚ್ಚು ರನ್ ಗಳಿಸಿದ ಗೌರವಕ್ಕೆ ಪಾತ್ರರಾಗಿದ್ದರು.
ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ಸಿಡಿಸಿಯೂ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದ ಕರುಣ್ ನಾಯರ್ ಜೀವನ ಮುಗಿದೇ ಹೋಯಿತು ಎಂದು ಭಾವಿಸಲಾಗಿತ್ತು. ಆದರೆ ದೇಶೀಯ ಟೂರ್ನಿಯಲ್ಲಿ ನೀಡಿದ ಅಮೋಘ ಪ್ರದರ್ಶನದಿಂದ ಗಮನ ಸೆಳೆದಿದ್ದ ಕರುಣ್ ನಾಯರ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮೂಲಧನ 50 ಲಕ್ಷ ರೂ.ಗೆ ಸೆಳೆದುಕೊಂಡಿತ್ತು.
ಕರುಣ್ ನಾಯರ್ ಅಮೋಘ ಪ್ರದರ್ಶನದ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ 12 ರನ್ ಗಳಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುಂಡಿತು. ಅಲ್ಲದೇ ಐಪಿಎಲ್ ನಲ್ಲಿ ಮೊದಲ ಬಾರಿ ಸೋಲಿನ ರುಚಿ ಅನುಭವಿಸಿತು.